ಬೆಂಗಳೂರು: ಕೋವಿಡ್ 19 ಸಂಕಷ್ಟದಲ್ಲಿ ಆರ್ಥಿಕ ಕ್ರೋಢೀಕರಣಕ್ಕಾಗಿ ತಿಂಗಳ ಹಿಂದೆ ಬಿಡಿಎ ಮೂಲೆ ನಿವೇಶನ ಹರಾಜಿಗೆ ಮುಂದಾಗಿದ್ದ ಸರ್ಕಾರ, ಇದೀಗ ಸಿಎ (ನಾಗರಿಕ ಸೌಲಭ್ಯ) ನಿವೇಶನ ಮಾರಾಟಕ್ಕೆ ಕೈ ಹಾಕಿದೆ. ಆದರೆ, ನಾಗರಿಕ ಸೌಲಭ್ಯಕ್ಕೆ ಮೀಸ ಲಿಟ್ಟ ನಿವೇಶನಗಳನ್ನು ಮಾರುವಂತಿಲ್ಲ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ.
ಆದರೆ, ಸರ್ಕಾರದ ಆದೇಶದಂತೆ ತಿದ್ದುಪಡಿ ತಂದು ಮಾರಾಟಕ್ಕೆ ಅವಕಾಶ ಕಲ್ಪಿಸಲು ಪ್ರಾಧಿಕಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸಂಘ ಸಂಸ್ಥೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿರುವ ಸಿಎ ನಿವೇಶನ ಮಾರಾಟ ಮಾಡಲು ಚಿಂತನೆ ನಡೆಸಲಾಗಿದ್ದು, ಕಾನೂನು ತೊಡಕು ಪರಿಹರಿಸುವ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಿಡಿಎ ಕಾರ್ಯದರ್ಶಿ ಡಾ.ವಾಸಂತಿ ಅಮರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 12 ಸಾವಿರಕ್ಕೂ ಅಧಿಕ ಸಿಎ ನಿವೇಶನಗಳಿದ್ದು, ಶೈಕ್ಷಣಿಕ, ಧಾರ್ಮಿಕ, ಕೈಗಾರಿಕಾಹಾಗೂ ಸಂಘ ಸಂಸ್ಥೆಗಳಿಗೆ 30-40 ವರ್ಷಗಳ ಗುತ್ತಿಗೆ ಆಧಾರದಲ್ಲಿ ನಿವೇಶನ ನೀಡಲಾಗಿದೆ. ನಾಗರಿಕ ಸೌಲಭ್ಯ ನಿವೇಶನಗಳನ್ನು ಭೋಗ್ಯಕ್ಕೆ ಪಡೆದು ಕೊಂಡವರಿಗೆ ಇಂದಿನ ಮಾರುಕಟ್ಟೆ ಬೆಲೆಗೆ ಖರೀದಿ ಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.ಮೂಲೆ ನಿವೇಶಗಳ ಮಾರಾಟದಿಂದ 15 ಸಾವಿರ ಕೋಟಿ ರೂ. ನಿರೀಕ್ಷೆಯಲ್ಲಿರುವ ಸರ್ಕಾರ, ಸಿಎ ನಿವೇಶನಗಳಿಂದ ಸುಮಾರು 30 ಸಾವಿರ ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇಟ್ಟುಕೊಂಡಿದೆ.
ಆದಾಯ ಕ್ರೋಢೀ ಕರಣಕ್ಕಾಗಿ ಬಿಡಿಎ ಮೂಲೆ ಸೈಟು ಹರಾಜು, ಬಿಡಿಎ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಮನೆ ಸಕ್ರಮ, ಸಿಎ ಸೈಟುಗಳ ಮಾರಾಟದಿಂದ ಪ್ರಾಧಿಕಾರ ಸಾವಿ ರಾರು ಎಕರೆ ಜಮೀನನ್ನು ಕಳೆದು ಕೊಳ್ಳಲಿದೆ. ಪ್ರಾಧಿಕಾರದ ಆದಾಯ ಮೂಲವೇ ಇಲ್ಲದಂತಾಗುತ್ತದೆ. ಈಗಾಗಲೇ ಸಾಲದ ಸುಳಿಯಲ್ಲಿರುವ ಬಿಡಿಎ, ತನ್ನ ಆಸ್ತಿಗಳನ್ನು ಕಳೆದುಕೊಂಡರೆ ಮುಂದಿನ ದಿನಗಳಲ್ಲಿ ಅಂದಿನ ಬೆಲೆಗೆ ಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ.