ಕುಂದಾಪುರ: ಇಲ್ಲಿನ ತಾಲೂಕು ಪಂಚಾಯತ್ ಬಳಿಯ ಡಿ. ದೇವರಾಜ ಅರಸು ಬಿಸಿಎಂ ಮೆಟ್ರಿಕ್ ಅನಂತರದ ವಿದ್ಯಾರ್ಥಿನಿ ನಿಲಯದಲ್ಲಿ ನಿಗಾದಲ್ಲಿ ಇದ್ದ 33 ಮಂದಿಯ ವರದಿಯೂ ನೆಗೆಟಿವ್ ಬಂದಿದೆ.
ಕೋವಿಡ್-19 ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಇರುವ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿ ಲೋ ರಿಸ್ಕ್ ಕ್ವಾರಂಟೈನ್ ಕೇಂದ್ರವಾಗಿ ಪರಿವರ್ತಿಸಿದ್ದರು. ಸಹಾಯಕ ಕಮಿಷನರ್ ಕೆ.ರಾಜು, ತಹಶೀಲ್ದಾರ್ ತಿಪ್ಪೇಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ ಅವರ ತಂಡ ಹಾಸ್ಟೆಲ್‌ಗೆ ಭೇಟಿ ನೀಡಿ ಮೂಲಭೂತ ಸೌಲಭ್ಯ, ಸ್ವತ್ಛತೆ, ಸುರಕ್ಷತೆಯನ್ನು ಪರಿಗಣಿಸಿ ಕೇಂದ್ರವಾಗಿ ಪರಿಗಣಿಸಿ ಆದೇಶಿಸಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ದಯಾನಂದ್ ಪಿ., ತಾಲೂಕು ವಿಸ್ತರಣಾಧಿಕಾರಿ ಬಿ.ಎಸ್. ಮಾದಾರ್ ಅವರ ನಿರ್ದೇಶನದಂತೆ ಮೂರು ವಸತಿ ನಿಲಯಗಳ ಮೇಲ್ವಿಚಾರಕರು, ನಿಯೋಜಿತ ಅಡುಗೆ ಸಿಬಂದಿ ಕ್ವಾರಂಟೈನ್ ಕೇಂದ್ರದ ಹೊಣೆ ನಿರ್ವಹಿಸಲಾರಂಭಿಸಿದರು.
ಮೊದಲು 10, ನಂತರ 8, ಆ ಬಳಿಕ 15 ಮಂದಿ ತಲಾ ಮೂರು ದಿನಗಳಂತೆ ಇಲ್ಲಿದ್ದು ವರದಿ ನೆಗೆಟಿವ್ ಬಂದು ತೆರಳಿದ್ದಾರೆ. ಪ್ರತಿ ಬಾರಿಯೂ ಸ್ಯಾನಿಟೈಸೇಶನ್ ಮಾಡಲಾಗುತ್ತಿತ್ತು.
ಇಲಾಖೆಯ ದೂರದ ಅಡುಗೆ ಕೇಂದ್ರದಲ್ಲಿ ಅಡುಗೆ ತಯಾರಿಸಿ ಪಾರ್ಸೆಲ್ ನೀಡಲಾಗುತ್ತಿತ್ತು. ಇದೇ ಇಲಾಖೆಯ ಅಧೀನದ ಬೈಂದೂರಿನ ಹಾಸ್ಟೆಲ್‌ನ್ನು ವಲಸೆ ಕಾರ್ಮಿಕರ ಆಶ್ರಯ ಕೇಂದ್ರವಾಗಿ ಮಾಡಲಾಗಿತ್ತು. ಇಲ್ಲಿಯೂ ಬೆಳಗಿನ ಉಪಾಹಾರವನ್ನು ಇಲಾಖಾ ಅಡುಗೆ ಸಿಬಂದಿ ನೀಡಿ, ಮೇಲ್ವಿಚಾರಕರು ಕೇಂದ್ರ ನಿರ್ವಹಿಸುತ್ತಿದ್ದರು. ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಿಕೊಡಲಾಗಿದ್ದು ಕ್ವಾರಂಟೈನ್ ಕೇಂದ್ರ ತಾತ್ಕಾಲಿವಾಗಿ ಖಾಲಿಯಾಗಿದೆ. ಈಗಲೂ ಈ ಹಾಸ್ಟೆಲ್‌ಗಳು ತಾಲೂಕು ಆಡಳಿತದ ಸುಪರ್ದಿಯಲ್ಲಿದ್ದು ಅಗತ್ಯಬಿದ್ದರೆ ಮತ್ತಷ್ಟು ಮಂದಿಯನ್ನು ಕ್ವಾರಂಟೈನ್ ವಹಿಸುವ ಸಂದರ್ಭ ಬಂದಾಗ ದಾಖಲಿಸಲಿದ್ದಾರೆ.