ಗಂಗಾವತಿ: ರಾಜ್ಯದ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಪದೇಪದೆ ಎಡವಟ್ಟುಗಳು ನಡೆಯುತ್ತಿವೆ .ಸಾಮಾನ್ಯ ಪದವಿ ವಿದ್ಯಾರ್ಥಿ ನಿಲಯಗಳ ಪ್ರವೇಶ ದಿನಾಂಕ ಪ್ರಕಟಣೆಯಲ್ಲಿ ಇಲಾಖೆ ವೆಬ್ ಸೈಟ್ ನಲ್ಲಿ ಮತ್ತು ಆದೇಶದಲ್ಲಿ ಗೊಂದಲಗಳು ಉಂಟಾಗಿವೆ .ಇದರಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ರಾಜ್ಯದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಾಮಾನ್ಯ ಪದವಿಯಲ್ಲಿ ಓದುತ್ತಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯದ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ .ಇಲಾಖೆಯ ಆಯುಕ್ತರು ಅಧಿಕೃತವಾಗಿ ಸೆಪ್ಟೆಂಬರ್ 12 ಕೊನೆಯ ದಿನಾಂಕ ಎಂದು ಆದೇಶದಲ್ಲಿ ತಿಳಿಸಿದ್ದಾರೆ ಆದರೆ ಆನ್ ಲೈನ್ ಮೂಲಕ ಹಿಂದುಳಿದ ವರ್ಗಗಳ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿಗಳನ್ನು ಸಲ್ಲಿಸಲು ವಿದ್ಯಾರ್ಥಿಗಳು ದಾಖಲಾತಿ ಸಮೇತ ಯತ್ನಿಸಿದರೂ ಈಗಾಗಲೇ ಅರ್ಜಿ ಸಲ್ಲಿಸುವ ಅವಧಿ ಮುಕ್ತಾಯವಾಗಿದೆ ಎಂದು ಇಂಗ್ಲಿಷ್ ನಲ್ಲಿ ಸಂದೇಶ ಬರುತ್ತಿದೆ .ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.
ಕಾಲೇಜುಗಳು ಆರಂಭವಾಗಿದ್ದು ಗ್ರಾಮೀಣ ಭಾಗದಿಂದ ವಿದ್ಯಾರ್ಥಿಗಳು ಕಾಲೇಜ್ ವಿದ್ಯಾಭ್ಯಾಸಕ್ಕೆ ಹಣ ಕೊಟ್ಟು ಬಸ್ನಲ್ಲಿ ತೆರಳಬೇಕಾದ ಅನಿವಾರ್ಯತೆ ಇದೆ .ಹಿಂದುಳಿದ ವರ್ಗಗಳ ಇಲಾಖೆ ಯವರು ಒಂದಿಲ್ಲೊಂದು ಗೊಂದಲದಲ್ಲಿ ವಿದ್ಯಾರ್ಥಿಗಳನ್ನು ಪರದಾಡುವಂತೆ ಮಾಡುತ್ತಿದ್ದಾರೆ .ಅಧಿಕೃತ ಆದೇಶದಲ್ಲಿ ಸೆಪ್ಟೆಂಬರ್ 12 ಎಂದು ಮಾಹಿತಿ ನೀಡಿದ್ದರೂ ಇಲಾಖೆಯ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಈಗಾಗಲೇ ಅರ್ಜಿ ಸಲ್ಲಿಸುವ ಅವಧಿ ಮುಕ್ತಾಯವಾಗಿದೆ ಎಂದು ಇಂಗ್ಲಿಷ್ ನಲ್ಲಿ ಸಂದೇಶ ಬರುತ್ತಿದೆ.
ಬಹುತೇಕ ವಿದ್ಯಾರ್ಥಿಗಳು ತರಗತಿಗಳನ್ನು ತಪ್ಪಿಸಿ ಮನೆಯಲ್ಲಿಯೇ ಉಳಿಯಬೇಕಾದರೆ ಹಣವುಳ್ಳವರು ಮಾತ್ರ ದಿನವೂ ಬಸ್ ದರ ಪಾವತಿಸಿ ತಮ್ಮ ಹಳ್ಳಿಗಳಿಂದ ಪದವಿ ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ ಸರ್ಕಾರ ಈ ಗೊಂದಲಕ್ಕೆ ತೆರೆ ಎಳೆದ ಮತ್ತೊಮ್ಮೆ ಆನ್ ಲೈನ್ ಮೂಲಕ ಸಾಮಾನ್ಯ ಪದವಿ ವಿದ್ಯಾರ್ಥಿ ನಿಲಯ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕಿದೆ.ಜತೆಗೆ ವೈದ್ಯಕೀಯ ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳನ್ನು ಅಭ್ಯಾಸ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳಿಗೂ ಸಹ ಇನ್ನೂ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಹ್ವಾನಿಸಿಲ್ಲ.ಇದರಿಂದ ಪಿಜಿಗಳಲ್ಲಿ ಮತ್ತು ರೂಂ ಗಳನ್ನು ಮಾಡಿಕೊಂಡು ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವ ಸ್ಥಿತಿ ಉಂಟಾಗಿದೆ .
ಇಂತಹ ಗೊಂದಲಗಳನ್ನು ಸೃಷ್ಟಿ ಮಾಡುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.