ಬೆಂಗಳೂರು : ವಿದ್ಯಾರ್ಥಿಗಳಲ್ಲಿ ಉದ್ಯೋಗಕ್ಕೆ ಹಾಗೂ ಸ್ವಯಂ ಉದ್ಯಮ ಪ್ರಾರಂಭಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರು ಛೇಂಬರ್ಸ್ ಆಫ್ ಇಂಡಸ್ಟ್ರಿ ಆ್ಯಂಡ್ ಕಾಮರ್ಸ್ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ಮೈಸೂರು ಮತ್ತು ಧಾರವಾಡದಲ್ಲಿ ಪ್ರಾರಂಭಿಸುತ್ತಿರುವ ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಮ್ಯಾನೇಜ್‌ಮೆಂಟ್ ಬಹಳ ಸಹಕಾರಿ ಆಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಇದನ್ನೂ ಓದಿ : ರಿಷಭ್ ಪಂತ್ ಮಾತ್ರವಲ್ಲದೆ ಟೀಂ ಇಂಡಿಯಾ ಸಹಾಯಕ ಸಿಬ್ಬಂದಿಗೂ ಕೋವಿಡ್ ಪಾಸಿಟಿವ್
ಇಂದು ಬೆಂಗಳೂರಿನಲ್ಲಿ ಮೈಸೂರು ಮತ್ತು ಧಾರವಾಡದ ನೂತನ ಬಿಸಿಐಸಿ-ಎಸ್‌ಡಿಎಂ ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಮ್ಯಾನೇಜ್‌ಮೆಂಟ್ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಇಂಡಸ್ಟ್ರಿಯ ಅಗತ್ಯಕ್ಕೆ ತಕ್ಕಂತಹ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಇಂದು ಉದ್ಘಾಟಿಸಲಾಗಿರುವ ಬಿಸಿಐಸಿ-ಎಸ್‌ಡಿಎಂ ನೋಡಲ್ ಸೆಂಟರ್ ಗಳು ಬಹಳ ಪರಿಣಾಮಕಾರಿಯಾಗಲಿವೆ. ಈ ಎಕ್ಸಲೆನ್ಸ್ ಸೆಂಟರ್‌ಗಳ ಮೂಲಕ ವಿದ್ಯಾರ್ಥಿಗಳು ಉದ್ಯೋಗಕ್ಕೆ ಸೇರುವ ಮುನ್ನವೇ ಉದ್ಯೋಗದ ಅನುಭವ ಮತ್ತು ಮಾಹಿತಿಯನ್ನು ಪಡೆದುಕೊಳ್ಳಲಿದ್ದಾರೆ. ಬೆಂಗಳೂರು ಛೇಂಬರ್ಸ್ ಆಫ್ ಕಾಮರ್ಸ್ ನ ಅನುಭವಿ ಉದ್ಯಮಿಗಳು ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ದಿ, ಹೊಸ ಸಂಶೋಧನೆ ಹಾಗೂ ಸ್ವಂತ ಉದ್ಯಮವನ್ನು ಬೆಳೆಸುವ ತರಬೇತಿಯನ್ನು ನೀಡಲಿರುವುದು ಸಂತಸದ ವಿಷಯವಾಗಿದೆ. ಇಂತಹ ಪ್ರಯತ್ನವನ್ನು ರಾಜ್ಯದ ಇತರೆ ಭಾಗಗಳಿಗೂ ವಿಸ್ತರಿಸಲು ಎರಡೂ ಸಂಸ್ಥೆಗಳು ಮುಂದಾಗಲಿ ಎಂದು ಹೇಳಿದರು.
ಬೆಂಗಳೂರು ಛೇಂಬರ್ಸ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ ಕರೋನಾ ಸಾಂಕ್ರಾಮಿಕ ರೋಗ ಹೆಚ್ಚಾಗಿದ್ದಾಗ ರಾಜ್ಯ ಸರಕಾರದ ಜೊತೆಯಲ್ಲಿ ಕೈಜೋಡಿಸಿ ಹಲವಾರು ಕೊಡುಗೆಗಳನ್ನು ನೀಡಿತು. ಸಂಕಷ್ಟದ ಸಮಯದಲ್ಲಿ ಸರಕಾರ ಮತ್ತು ಉದ್ಯಮಿಗಳ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸಿದ ಬಿಸಿಐಸಿ ಅವರ ಕಾರ್ಯ ಶ್ಲಾಘನೀಯ. ರಾಜ್ಯ ದೇಶದ ಪ್ರಮುಖ ಬಂಡವಾಳ ಹೂಡಿಕೆಯ ತಾಣವಾಗಿ ಹೊರಹೊಮ್ಮಿದೆ. ಇದನ್ನ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ ಡಿ ವೀರೇಂದ್ರ ಹೆಗ್ಗಡೆ, ಬೆಂಗಳೂರು ಛೇಂಬರ್ಸ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್‌ನ ಅಧ್ಯಕ್ಷರಾದ ಟಿ.ಆರ್ ಪರಶುರಾಮನ್, ಹಿರಿಯ ಉಪಾಧ್ಯಕ್ಷರಾದ ಕೆ.ಆರ್ ಶೇಖರ್, ಉಪಾಧ್ಯಕ್ಷರಾದ ಡಾ ರವೀಂದ್ರನ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮೈಸೂರಿನ ನಿರ್ದೇಶಕರಾದ ಡಾ. ಎನ್ ಆರ್ ಪರುಸುರಾಮನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಗದಗ ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ 30 ಕೋಟಿ ರೂ. ಗೆ ಅನುಮೋದನೆ: ಸಚಿವ ಪ್ರಭು ಚವ್ಹಾಣ್