Advertisement
2018ರಿಂದ 2022ರವರೆಗೆ ಈಗಾಗಲೇ ಬಿಸಿಸಿಐ ಗಳಿಸಿರುವ ಲಾಭ 18,500 ಕೋಟಿ ರೂ.ಪ್ರತೀವರ್ಷ ಏಪ್ರಿಲ್-ಮೇನಲ್ಲಿ ಐಪಿಎಲ್ ನಡೆಯುತ್ತದೆ. 48 ದಿನಗಳ ಬೃಹತ್ ಕೂಟ. 60 ಪಂದ್ಯಗಳು ನಡೆಯುತ್ತವೆ. ವಿಶ್ವದ ಖ್ಯಾತನಾಮ ಆಟಗಾರರು ಆಡುವ, ವಿಶ್ವದ ಅಭಿಮಾನಿಗಳು ವೀಕ್ಷಿಸುವ ಇಂತಹ ಕೂಟದ ಹಣಕಾಸು ಲೆಕ್ಕಾಚಾರ ಬಹಳ ಸಂಕೀರ್ಣ, ಅಗಾಧ! ಹೇಗೆಯೇ ನೋಡಿದರೂ ಐಪಿಎಲ್‌ನಿಂದ ಭರ್ಜರಿ ಲಾಭ ಮಾಡುವುದು ಬಿಸಿಸಿಐ ಮಾತ್ರ. ನೇರಪ್ರಸಾರ ಮಾಡುವ ಟೀವಿ ವಾಹಿನಿ, ಸಾವಿರಾರು ಕೋಟಿ ರೂ. ಹೂಡುವ ಫ್ರಾಂಚೈಸಿಗಳು ಗಳಿಸಿದ್ದನ್ನು ವಾಪಸ್ ಪಡೆಯುವುದು ಹೇಗೆ ಎನ್ನುವುದು ಬಹಳ ಕುತೂಹಲಕರ.
ಸಾವಿರಾರು ಕೋಟಿ ರೂ. ಖರ್ಚು ಮಾಡುವ ಟೀವಿ ವಾಹಿನಿ ಅದನ್ನು ವಾಪಸ್ ಪಡೆಯಲು ಜಾಹೀರಾತುದಾರರನ್ನು ಅವಲಂಬಿಸುತ್ತದೆ. 2019ರ ಆವೃತ್ತಿಗೆ 9 ಪ್ರಾಯೋಜಕರು 750 ಕೋಟಿ ರೂ.ಗಳನ್ನು ಸ್ಟಾರ್‌ಗೆ ನೀಡಿದ್ದಾರೆ. ಇನ್ನು ಜಾಹೀರಾತು ಲೆಕ್ಕಾಚಾರ. ಐಪಿಎಲ್ ವೇಳೆ ಪ್ರತೀ ಹತ್ತು ಸೆಕೆಂಡ್‌ಗೆ 10 ಲಕ್ಷ ರೂ.ವನ್ನು ಜಾಹೀರಾತುದಾರರು ನೀಡಬೇಕು. 1 ವರ್ಷ ಜಾಹೀರಾತಿನಿಂದ ಸರಾಸರಿ 2000 ಕೋಟಿ ರೂ. ಗಳಿಸುವ ನಿರೀಕ್ಷೆಯಿದೆ. ಒಟ್ಟಾರೆ 5 ವರ್ಷಕ್ಕೆ ಸ್ಟಾರ್17,500 ಕೋಟಿ ರೂ. ಗಳಿಸುತ್ತದೆ. ಇದು ಖರ್ಚಿಗಿಂತ ಕೇವಲ 2,500 ಕೋಟಿ ರೂ. ಹೆಚ್ಚು. ಇದೆಲ್ಲ ನೋಡಿದರೆ ಯಾವ ಲೆಕ್ಕಾಚಾರದಲ್ಲಿ ಸ್ಟಾರ್ ಈ ಮಟ್ಟದಲ್ಲಿ ಹಣ ಹೂಡುತ್ತಿದೆ ಎಂಬ ಪ್ರಶ್ನೆ ಏಳುತ್ತದೆ. ಫ್ರಾಂಚೈಸಿಗಳಿಗೇನು ಲಾಭ?
ಫ್ರಾಂಚೈಸಿಗಳು ಟಿಕೆಟ್ ಮಾರಾಟದ ಮೇಲೆ ಕಣ್ಣಿಟ್ಟಿರುತ್ತವೆ. ಅದರಿಂದ ದೊಡ್ಡ ಮೊತ್ತವೇ ಬರುತ್ತದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯವೊಂದರ ಕನಿಷ್ಠ ದರ 800 ರೂ.ನಿಂದ ಶುರುವಾಗುತ್ತದೆ, ಗರಿಷ್ಠ ದರ 35,000 ರೂ. ಚಿನ್ನಸ್ವಾಮಿ ಮೈದಾನದ ಪ್ರೇಕ್ಷಕ ಸಾಮರ್ಥ್ಯ 35,000. ಬಹುತೇಕ ಪಂದ್ಯಗಳಲ್ಲಿ ಮೈದಾನ ತುಂಬಿರುತ್ತದೆ. ಫ್ರಾಂಚೈಸಿಗಳು ಪ್ರಾಯೋಜಕರನ್ನು ಹುಡುಕಿಕೊಳ್ಳುತ್ತವೆ. ಅವರ ಉತ್ಪನ್ನಗಳಿಗೆ ಜಾಹೀರಾತು ನೀಡುತ್ತವೆ. ಇದರಿಂದ ಅವರ ಹಣ ವಾಪಸ್ ಬರುತ್ತದೆ. ಜನಪ್ರಿಯ ತಂಡಕ್ಕೆ, ತಾರೆಯರಿರುವ ತಂಡಕ್ಕೆ ಲಾಭ ಜಾಸ್ತಿ. ಜೊತೆಗೆ ಫ್ರಾಂಚೈಸಿಗಳ ಬ್ರ್ಯಾಂಡ್ ಮೌಲ್ಯ ಏರುತ್ತದೆ. ಅವು ಜಗತ್ತಿಗೆ ಪರಿಚಯವಾಗುತ್ತವೆ.