Advertisement

ಪಾಸಿಟಿವ್‌ ಬಂದರೆ ತಂಡದಿಂದ ಹೊರಕೆ : ಟೀಮ್‌ ಇಂಡಿಯಾಕ್ಕೆ ಬಿಸಿಸಿಐ ಖಡಕ್‌ ಸೂಚನೆ

11:11 PM May 11, 2021 | Team Udayavani |

ಹೊಸದಿಲ್ಲಿ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೀಮ್‌ ಇಂಡಿಯಾ ಭಾಗಿಯಾಗಲಿದೆ. ಇದಕ್ಕಾಗಿ ಈಗಾಗಲೇ ತಂಡವನ್ನು ಆಯ್ಕೆ ಮಾಡಲಾಗಿದ್ದು, ಜೂನ್‌ 2ರಂದು ಕ್ರಿಕೆಟಿಗರು ಇಂಗ್ಲೆಂಡಿಗೆ ವಿಮಾನವೇರಲಿದ್ದಾರೆ. ಆದರೆ ಇದಕ್ಕೂ ಮುನ್ನ ಬಿಸಿಸಿಐ ಎಲ್ಲ ಆಟಗಾರರಿಗೂ ಖಡಕ್‌ ಸೂಚನೆಯೊಂದನ್ನು ರವಾನಿಸಿದೆ.

Advertisement

ಈ ಪ್ರವಾಸಕ್ಕೂ ಮುನ್ನ ಎಲ್ಲ ಆಟಗಾರರು ಮುಂಬಯಿಗೆ ಆಗಮಿಸಿದ ಬಳಿಕ 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ಬಳಿಕ ಆಟಗಾರರಿಗೆ ಎರಡು ಬಾರಿ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಾಗುತ್ತದೆ. ಈ ವೇಳೆ ಯಾರಿಗಾದರೂ ಕೊರೊನಾ ಪಾಸಿಟಿವ್‌ ಬಂದರೆ ಅವರನ್ನು ಪ್ರವಾಸದಿಂದ ಕೈಬಿಡಲಾಗುತ್ತದೆಯೇ ಹೊರತು ಪ್ರತ್ಯೇಕ ಚಾರ್ಟರ್ಡ್‌ ವಿಮಾನ ಮೂಲಕ ಪ್ರಯಾಣಿಸುವ ವ್ಯವಸ್ಥೆಯನ್ನು ಮಾಡುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಮತ್ತಷ್ಟು ಮುನ್ನೆಚ್ಚರಿಕೆ
ಈ ಬಾರಿಯ ಐಪಿಎಲ್‌ನ ಬಯೋಬಬಲ್‌ ಒಳಗೆ ಕೊರೊನಾ ವೈರಸ್‌ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಬಿಸಿಸಿಐ ಮತ್ತಷ್ಟು ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದೆ. ಮುಂಬಯಿಗೆ ತೆರಳುವುದಕ್ಕೂ ಮುನ್ನ ಆಟಗಾರರ ಕುಟುಂಬಸ್ಥರಿಗೂ ಆರ್‌ಟಿಪಿಸಿಆರ್‌ ಪರೀಕ್ಷೆಯನ್ನು ನಡೆಸುವುದಾಗಿ ತಿಳಿಸಿದೆ.

ಪ್ರಸ್ತುತ ಎಲ್ಲ ಆಟಗಾರರೂ ತಮ್ಮ ಮನೆಗಳಲ್ಲಿದ್ದಾರೆ. ಸರಣಿ ದೀರ್ಘ‌ ಅವಧಿಯದ್ದಾಗಿರುವ ಕಾರಣ ಐಸೊಲೇಶನ್‌ನಂತಹ ನಿರ್ಬಂಧಗಳೊಂದಿಗೆ ಕುಟುಂಬ ಸದಸ್ಯರಿಗೂ ಅನುಮತಿ ನೀಡಲಾಗಿದೆ.

ಲಸಿಕೆ ಪಡೆಯಲು ಸೂಚನೆ
ಇದೇ ವೇಳೆ ಬಿಸಿಸಿಐ ಎಲ್ಲ ಆಟಗಾರರಿಗೂ ಕೊರೊನಾ ವೈರಸ್‌ ಲಸಿಕೆಯ ಮೊದಲ ಡೋಸ್‌ ತೆಗೆದುಕೊಳ್ಳುವಂತೆ ಸೂಚಿಸಿದೆ. ಈ ಆಟಗಾರರಿಗೆ ಎರಡನೇ ಹಂತದ ಲಸಿಕೆಯನ್ನು ಇಂಗ್ಲೆಂಡ್‌ನ‌ಲ್ಲಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಲಂಕಾ ಸರಣಿಗೆ ದ್ರಾವಿಡ್‌ ಕೋಚ್‌?
ಹೊಸದಿಲ್ಲಿ, ಮೇ 11: ಜುಲೈ ತಿಂಗಳಿನಲ್ಲಿ ಟೀಮ್‌ ಇಂಡಿಯಾ ಶ್ರೀಲಂಕಾಗೆ ಪ್ರವಾಸ ತೆರಳಿ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗಲಿದೆ. ಈ ಪ್ರವಾಸಕ್ಕೆ ಮಾಜಿ ಬ್ಯಾಟ್ಸ್‌ಮನ್‌ ರಾಹುಲ್‌ ದ್ರಾವಿಡ್‌ ಕೋಚ್‌ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿರಾಟ್‌ ಕೊಹ್ಲಿ ನೇತೃತ್ವದ ಟೀಮ್‌ ಇಂಡಿಯಾ ಇಂಗ್ಲೆಂಡ್‌ ಪ್ರವಾಸದಲ್ಲಿದ್ದಾಗಲೇ ಮತ್ತೂಂದು ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದ್ದಾರೆ.

ಪ್ರಧಾನ ಕೋಚ್‌ ರವಿ ಶಾಸ್ತ್ರಿ, ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಜತೆಗೆ ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಠೊಡ್‌ ಇಂಗ್ಲೆಂಡ್‌ ಪ್ರವಾಸದಲ್ಲಿರುವ ಕಾರಣ ಶ್ರೀಲಂಕಾ ಪ್ರವಾಸಕ್ಕೆ ಲಭ್ಯರಾಗುವುದಿಲ್ಲ. ಹೀಗಾಗಿ ಕೋಚಿಂಗ್‌ ವಿಭಾಗವೂ ಹೊಸಬರಿಂದಲೇ ಕೂಡಿರಲಿದೆ. ಆಗ ಪ್ರಧಾನ ಕೋಚ್‌ ಜವಾಬ್ದಾರಿ ದ್ರಾವಿಡ್‌ ಪಾಲಾಗುವ ಸಾಧ್ಯತೆ ದಟ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next