ಮುಂಬಯಿ: ಲೋಧಾ ಸಮಿತಿ ಶಿಫಾರಸಿನಂತೆ ಬಿಸಿಸಿಐ ಸಂಪೂರ್ಣ ಹೊಸ ಸಂವಿಧಾನ ಅಳವಡಿಸಿಕೊಂಡದ್ದು ಇತಿಹಾಸ. ಆದರೀಗ ನೂತನವಾಗಿ ಅಧಿಕಾರಕ್ಕೇರಿದ ಸೌರವ್ ಗಂಗೂಲಿ ನೇತೃತ್ವದ ಹೊಸ ತಂಡ, ಈ ಪರಿಷ್ಕೃತ ಸಂವಿಧಾನಕ್ಕೆ ತಿದ್ದುಪಡಿ ತರಲು ಹೊರಟಿದೆ. ಇದರ ಬೆನ್ನಲ್ಲೇ ಗಂಗೂಲಿ ಅಧ್ಯಕ್ಷತೆಯನ್ನು ಕೇವಲ 9 ತಿಂಗಳಿಗೆ ಸೀಮಿತಗೊಳಿಸದೆ, ಪೂರ್ಣಾವಧಿಗೆ ಮುಂದುವರಿಸಲು ಬಿಸಿಸಿಐಯಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ.
ಗಂಗೂಲಿಗೆ ಅನುರಾಗ್ ಬೆಂಬಲ
ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿಗೆ ವಿವಾದವೊಂದು ಸುತ್ತಿಕೊಂಡಿದೆ. ಅವರು ಬಿಸಿಸಿಐ ಒಪ್ಪಂದ ಮಾಡಿಕೊಂಡಿರುವ “ಡ್ರೀಮ್ 11 ಬೆಟ್ಟಿಂಗ್ ಆ್ಯಪ್’ ಬದಲು, “ಮೈ 11 ಸರ್ಕಲ್’ ಪರ ಟ್ವೀಟ್ ಮಾಡಿದ್ದರು. ಬಿಸಿಸಿಐ ಅಧ್ಯಕ್ಷರಾದವರೊಬ್ಬರು ಬೆಟ್ಟಿಂಗ್ ಆ್ಯಪ್ ಪರ ಟ್ವೀಟ್ ಮಾಡುವುದು ಎಷ್ಟು ಸರಿ ಎನ್ನುವುದು ಸದ್ಯದ ಪ್ರಶ್ನೆ.
ಆದರೆ ಬಿಸಿಸಿಐ ಮಾಜಿ ಅಧ್ಯಕ್ಷ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಗಂಗೂಲಿಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. “ಯಾರೂ ಕೂಡ ಭವಿಷ್ಯದಲ್ಲಿ ತಾನು ಬಿಸಿಸಿಐ ಅಧ್ಯಕ್ಷನಾಗುತ್ತೇನೆಂದು ಭಾವಿಸಿ ಜಾಹೀರಾತುಗಳಿಗೆ ಸಹಿ ಮಾಡಲಿಕ್ಕಾಗುವುದಿಲ್ಲ. ಅವರು ಜಾಹೀರಾತಿಗೆ ಸಹಿ ಹಾಕುವಾಗ ಅದರ ಷರತ್ತುಗಳೇನು ಎನ್ನುವುದನ್ನು ನಾವಿಲ್ಲಿ ಪರಿಶೀಲಿಸಬೇಕು.
ಅಲ್ಲದೇ ಮೊದಲ ಬಾರಿ ಗಂಗೂಲಿಯಂತಹ ಕ್ರಿಕೆಟ್ ತಾರೆಯೊಬ್ಬರು ಬಿಸಿಸಿಐ ಅಧ್ಯಕ್ಷರಾಗಿದ್ದಾರೆ. ಅವರನ್ನು ಮಾಮೂಲಿ ಅಧ್ಯಕ್ಷರ ರೀತಿ ಪರಿಗಣಿಸಲು ಆಗುವುದಿಲ್ಲ. ಇವೆಲ್ಲ ಸ್ವಹಿತಾಸಕ್ತಿ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಠಾಕೂರ್ ಕಟುವಾಗಿ ಹೇಳಿದ್ದಾರೆ.
ಡಿ. 1ರಂದು ಸಭೆ
ಡಿ. 1ರಂದು ಬಿಸಿಸಿಐ ಸರ್ವಸದಸ್ಯರ ಸಭೆ ನಡೆಯಲಿದೆ. ಇದರಲ್ಲಿ 4ನೇ 3ರಷ್ಟು ಮತ ಬಂದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಸಾಧ್ಯವಿದೆ. ಆದರೆ ಇದಕ್ಕೆ ಸರ್ವೋಚ್ಚ ನ್ಯಾಯಾಲಯದ ಒಪ್ಪಿಗೆ ಬೇಕು. ಬಿಸಿಸಿಐ ಸಭೆಯಲ್ಲಿ ಒಪ್ಪಿಗೆ ಪಡೆದು, ಸರ್ವೋಚ್ಚ ನ್ಯಾಯಾಲಯದಿಂದಲೂ ಅನುಮತಿ ಪಡೆಯುವ ಉತ್ಸಾಹದಲ್ಲಿದೆ ಬಿಸಿಸಿಐ ಹೊಸ ತಂಡ. ಇದರಿಂದ ಗಂಗೂಲಿ ಮುಂದುವರಿಕೆಗೆ ಅನುಕೂಲವಾಗಲಿದೆ.