ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ – ಬಿಸಿಸಿಐ – ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ಸುಪ್ರೀಂ ಕೋರ್ಟ್ ಹುದ್ದೆಯಿಂದ ಕಿತ್ತು ಹಾಕಿದೆ.
ಲೋಧಾ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನ ಮಾಡುವುದರ ವಿರುದ್ಧ ಐಸಿಸಿಯ ನೆರವನ್ನು ಕೋರಿದ್ದಕ್ಕಾಗಿ ಕೋರ್ಟ್ ನಿಂದನೆಯನ್ನು ಎದುರಿಸಲಿರುವ ಅನುರಾಗ್ ಠಾಕೂರ್‌ಗೆ ಸುಪ್ರೀಂ ಕೋರ್ಟ್, ಶೋಕಾಸ್ ನೊಟೀಸ್ ಜಾರಿ ಮಾಡಿದೆ.
ಲೋಧಾ ಸಮಿತಿಯ ಮುಖ್ಯಸ್ಥ ಆರ್ ಎಂ ಲೋಧಾ ಅವರು ಸುಪ್ರೀಂ ಕೋರ್ಟಿನ ಆದೇಶ ಸೂಕ್ತವಾದುದೆಂದು ಹೇಳಿದ್ದಾರೆ. ಲೋಧಾ ಸಮಿತಿ ಮಾಡಿದ್ದ ಸುಧಾರಣೆಗಳ ಶಿಫಾರಸುಗಳನ್ನು ಅನುಷ್ಠಾನಿಸುವಂತೆ ಸುಪ್ರೀಂ ಕೋರ್ಟ್ ಕಳೆದ ಜುಲೈಯಲ್ಲಿ ಹೊರಡಿಸಿದ್ದ ಆದೇಶವನ್ನು ಜಾರಿಗೆ ತರಲು ಬಿಸಿಸಿಐ ಸಿದ್ಧವಿರಲಿಲ್ಲ. ಅಂತೆಯೇ ಅದರ ಪರಿಣಾಮಗಳನ್ನು ಬಿಸಿಸಿಐ ಎದುರಿಸಬೇಕಾಗಿತ್ತು. ಸುಪ್ರೀಂ ಕೋರ್ಟಿನ ಈ ಆದೇಶವು ಇತರ ಕ್ರೀಡಾ ಸಂಸ್ಥೆಗಳಿಗೂ ಮಾದರಿಯಾಗಿ ಕೆಲಸ ಮಾಡಲಿದೆ ಎಂದು ಲೋಧಾ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ವರಿಷ್ಠ ನ್ಯಾಯಮೂರ್ತಿ ಟಿ ಎಸ್ ಠಾಕೂರ್ ನೇತೃತ್ವದ ಪೀಠವು ಹಲವು ತಿಂಗಳ ಬಳಿಕ ಇಂದಿನ ಆದೇಶ ಹೊರಡಿಸಿರುವುದು ಗಮನಾರ್ಹವಾಗಿದೆ.