ಮುಂಬೈ: ಐಪಿಎಲ್ ಬಗ್ಗೆ ದಿನಕ್ಕೊಂದು ಕಥೆಗಳು ಹಬ್ಬುತ್ತಲೇ ಇವೆ. ರದ್ದಾಗುತ್ತದೆ, ನಡೆಯುತ್ತದೆ, ಮುಂದೂಡಲ್ಪಡುತ್ತದೆ ಹೀಗೆ. ಇದೀಗ ಬಂದಿರುವ ಹೊಸಸುದ್ದಿ, ಐಪಿಎಲ್ ನಡೆಸಲು ಬಿಸಿಸಿಐ ಎರಡು ದಾರಿಗಳನ್ನು ಹುಡುಕುತ್ತಿದೆ.
ಆಗಸ್ಟ್- ಸೆಪ್ಟೆಂಬರ್ ನಲ್ಲಿ ಏಷ್ಯಾಕಪ್ ಟಿ20ಯನ್ನು ಮುಂದೂಡಿ ಐಪಿಎಲ್ ನಡೆಸುವುದು ಒಂದು ದಾರಿ, ಅಕ್ಟೋಬರ್-ನವೆಂಬರ್‌ನಲ್ಲಿ ವಿಶ್ವಕಪ್ ಟಿ20ಯನ್ನು ಮುಂದೂಡಿ ದರೆ ಐಪಿಎಲ್ ನಡೆಸುವುದು ಇನ್ನೊಂದು ದಾರಿ. ಈ ಎರಡೂ ದಾರಿಗಳಲ್ಲಿ ಹಲವು ಅಡೆತಡೆ ಗಳಿವೆ. ಅವನ್ನೆಲ್ಲ ದಾಟಿ ಐಪಿಎಲ್ ನಡೆಸಲು ಸಾಧ್ಯವೇ ಎನ್ನುವುದು ಯಕ್ಷಪ್ರಶ್ನೆ.
ಮೊದಲನೆಯದಾಗಿ ಕೋವಿಡ್-19 ಸೋಂಕು ಹಾವಳಿ ಎಲ್ಲಿಯವರೆಗೆ ಮುಂದುವರಿಯುತ್ತದೆ ಗೊತ್ತಿಲ್ಲ. ಆದ್ದರಿಂದ ಸರ್ಕಾರದ ವಿವಿಧ ನಿರ್ಬಂಧಗಳು (ಅಂತಾರಾಷ್ಟ್ರೀಯ ಗಡಿ ಬಂದ್, ವಿಮಾನಯಾನ ನಿಷೇಧ ಸೇರಿ) ಎಲ್ಲಿಯರೆಗೆ ಇರುತ್ತವೆ ಎನ್ನುವುದೂ ಖಾತ್ರಿಯಿಲ್ಲ. ಹಾಗಿರುವಾಗ ಆ ಸಮಯದಲ್ಲಿ ಬಿಸಿಸಿಐ ದಿನಾಂಕ ನಿಗದಿಪಡಿಸಿದರೂ, ವಿದೇಶಿ ಆಟಗಾರರು ಭಾರತಕ್ಕೆ ಬರುವ ಸ್ಥಿತಿಯಲ್ಲಿರುತ್ತಾರೆ ಎನ್ನುವುದಕ್ಕೆ ಖಾತ್ರಿಯೇನು? ವಿದೇಶಿ ಆಟಗಾರರು ಬರದಿದ್ದರೆ, ಐಪಿಎಲ್ ಕಳೆಗಟ್ಟುವುದಿಲ್ಲ ಎನ್ನುವುದು ಖಚಿತ.
ಇನ್ನು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್ ಟಿ20 ಇದೆ. ಆತಿಥ್ಯದ ಅವಕಾಶವಿರುವುದು ಪಾಕಿಸ್ತಾನದ ಬಳಿಯಲ್ಲಿ. ಭಾರತದ ಬಗ್ಗೆ ಹಲವು ಸಿಟ್ಟು ಹೊಂದಿರುವ ಅದು, ಕೂಟ ಮುಂದೂಡಲು ಬಿಡುವುದು ಸುತಾರಾಂ ಸಾಧ್ಯವಿಲ್ಲ. ಇನ್ನು ವಿಶ್ವಕಪ್ ಟಿ20. ಅದೂ ಮುಂದೂಡಲ್ಪಡುವ ನಿರೀಕ್ಷೆಯಿದೆ. ಆದರೆ ಐಸಿಸಿ ಇಷ್ಟು ಬೇಗಲೇ ನಿರ್ಧಾರ ತೆಗೆದುಕೊಳ್ಳಲು ಸಿದ್ಧವಿಲ್ಲ. ಜೊತೆಗೆ ಕೂಟ ಮುಂದೂಡುವ ಮನಸ್ಸೂ ಅದಕ್ಕಿಲ್ಲ. ಮುಂದೂಡಿದರೆ ಆಗ ಭಾರತ ಐಪಿಎಲ್ ನಡೆಸಬಹುದು. ಇದರಲ್ಲಿ ಹಲವು ಲೆಕ್ಕಾಚಾರಗಳಿವೆ.
ಟಿ20 ವಿಶ್ವಕಪ್ ಅನ್ನು ಒಂದು ವೇಳೆ ಮುಂದೂಡಿದರೂ, ಮುಂದಿನವರ್ಷವಂತೂ ನಡೆಸಲು ಸಾಧ್ಯವಿಲ್ಲ. ಆಗಲೂ ಟಿ20 ವಿಶ್ವಕಪ್ ಇರುತ್ತದೆ.ಇನ್ನು 2022ರಲ್ಲಿ ನಡೆಸಬಹುದಾದರೂ ಆಗ ಏಷ್ಯಾಡ್, ಕಾಮನ್‌ವೆ ಲ್ತ್ ಗೇಮ್ಸ್‌ಗಳಿರುತ್ತವೆ. ಈ ಎಲ್ಲ ಲೆಕ್ಕಾಚಾರಗಳನ್ನು ನೋಡಿದಾಗ ಕಾಣುವ ಒಂದು ದಟ್ಟ ಸಾಧ್ಯತೆ, ಐಪಿಎಲ್ ಅನ್ನೇ ರದ್ದು ಮಾಡುವುದು.