Advertisement
ದುಬಾೖ ಮತ್ತು ಶಾರ್ಜಾದಲ್ಲಿ ಮೊದಲ ಹಂತದ ಪಂದ್ಯಗಳನ್ನು ಆಯೋಜಿಸಿದ ಬಳಿಕ ಅಬುಧಾಬಿಯಲ್ಲಿ ಪಂದ್ಯಗಳನ್ನು ನಡೆಸುವುದು ಬಿಸಿಸಿಐ ಯೋಜನೆ ಎನ್ನಲಾಗಿದೆ. ಇದಕ್ಕೆ ಅಬುಧಾಬಿಯ ಕಟ್ಟುನಿಟ್ಟಿನ ಪ್ರಯಾಣ ನಿಯಮವೇ ಕಾರಣ. ದುಬಾೖ-ಶಾರ್ಜಾ ನಡುವಿನ ಪ್ರಯಾಣಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ದುಬಾೖಯಿಂದ 130 ಕಿ.ಮೀ. ದೂರದಲ್ಲಿರುವ ಅಬುಧಾಬಿಗೆ ತೆರಳುವ ಮುನ್ನ ಕ್ರಿಕೆಟಿಗರ ಮ್ಯಾಂಡಿಟರಿ ರ್ಯಾಪಿಡ್ ಟೆಸ್ಟ್ ನಡೆಸಬೇಕಾದುದು ಕಡ್ಡಾಯ. ಇದನ್ನು ಪ್ರತೀ ಸಲವೂ ನಡೆಸಬೇಕಾದ್ದರಿಂದ ಕೊನೆಯ ಹಂತದ ಪಂದ್ಯಗಳನ್ನು ಒಮ್ಮೆಲೇ ಅಬುಧಾಬಿಯಲ್ಲಿ ನಡೆಸುವುದು ಬಿಸಿಸಿಐ ಯೋಜನೆ.
ಈ ಕುರಿತು ಐಪಿಎಲ್ ಅಧ್ಯಕ್ಷ ಬೃಜೇಶ್ ಪಟೇಲ್ ಮತ್ತು ಅಧಿಕಾರಿ ಹೇಮಾಂಗ್ ಅಮೀನ್ ಯುಎಇ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ 48 ಗಂಟೆಗಳಲ್ಲಿ ಅಂತಿಮ ನಿರ್ಧಾರವೊಂದಕ್ಕೆ ಬರುವ ಸಾಧ್ಯತೆ ಇದೆ. ವಾರಾಂತ್ಯದಲ್ಲಿ ಐಪಿಎಲ್ ವೇಳಾಪಟ್ಟಿ ಪ್ರಕಟವಾದೀತು.
56 ಗ್ರೂಪ್ ಪಂದ್ಯಗಳಲ್ಲಿ ದುಬಾೖ ಮತ್ತು ಅಬುಧಾಬಿಯಲ್ಲಿ ತಲಾ 21, ಶಾರ್ಜಾದಲ್ಲಿ 14 ಪಂದ್ಯಗಳನ್ನು ಆಯೋಜಿಸುವುದು ಸದ್ಯದ ಲೆಕ್ಕಾಚಾರ. ಕೋವಿಡ್ ಕೇಸ್ ಹೆಚ್ಚಳ
ಯುಎಇಯಲ್ಲೀಗ ಕೋವಿಡ್ ಕೇಸ್ ಹೆಚ್ಚುತ್ತಿರುವುದು ಬಿಸಿಸಿಐಗೆ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಸ್ತುತ ಮುಂಬೈ ಮತ್ತು ಕೆಕೆಆರ್ ತಂಡಗಳು ಅಬುಧಾಬಿಯಲ್ಲಿವೆ. ಒಂದು ವೇಳೆ ಮೊದಲ ಲೀಗ್ ಪಂದ್ಯಗಳು ದುಬಾೖ ಮತ್ತು ಶಾರ್ಜಾದಲ್ಲಿ ನಡೆಯುವುದಾದರೆ ಆಗ ಈ ಎರಡೂ ತಂಡಗಳ ಆಟಗಾರರು ತಮ್ಮ ನೆಲೆಯನ್ನು ಇಲ್ಲಿಗೆ ವರ್ಗಾಯಿಸಬೇಕಾಗುತ್ತದೆ.