Advertisement

ಮುಂದಿನ ಐಪಿಎಲ್‌ನಲ್ಲಿ ಒಂದು ತಂಡ ಮಾತ್ರ ಹೆಚ್ಚಳ?

08:41 PM Jan 18, 2021 | Team Udayavani |

-ತಂಡಗಳ ಸಂಖ್ಯೆಯನ್ನು 8ರಿಂದ 10ಕ್ಕೇರಿಸಲು ಈ ಹಿಂದೆ ಬಿಸಿಸಿಐ ನಿರ್ಧಾರ
-ಪ್ರಸ್ತುತ 1 ತಂಡ ಹೆಚ್ಚಿಸಿ, ಪರಿಸ್ಥಿತಿಯನ್ನು ನೋಡಿ ಮುಂದುವರಿಯಲು ಚಿಂತನೆ?

Advertisement

ಮುಂಬೈ: ಮುಂದಿನವರ್ಷದಿಂದ ಐಪಿಎಲ್‌ ತಂಡಗಳ ಸಂಖ್ಯೆ 8ರಿಂದ 10ಕ್ಕೇರಲಿವೆ ಎಂದು ನಿರೀಕ್ಷಿಸಲಾಗಿತ್ತು. ಮೂಲಗಳ ಪ್ರಕಾರ ಮುಂದಿನವರ್ಷ ಕೇವಲ 1 ತಂಡ ಮಾತ್ರ ಹೆಚ್ಚಾಗಲಿದೆಯಂತೆ! ಸಮಯ ನೋಡಿಕೊಂಡು ಭವಿಷ್ಯದಲ್ಲಿ ಇನ್ನೊಂದು ತಂಡ ಹೆಚ್ಚಿಸುವ ಲೆಕ್ಕಾಚಾರದಲ್ಲಿ ಬಿಸಿಸಿಐ ಇದೆ ಎಂದು ಹೇಳಲಾಗಿದೆ. ಒಂದೇ ಬಾರಿಗೆ 10 ತಂಡಗಳಿಗೆ ಕೈಹಾಕುವುದು ಬೇಡ, ಮಾರುಕಟ್ಟೆಯನ್ನು ಪರಿಶೀಲಿಸಿ ನಿರ್ಧರಿಸುವುದು ಒಳಿತು ಎಂಬ ಲೆಕ್ಕಾಚಾರ ಇದರ ಹಿಂದಿದೆ.

ಸದ್ಯ 8 ತಂಡಗಳಿರುವುದರಿಂದ ಐಪಿಎಲ್‌ 60 ದಿನಗಳಲ್ಲಿ ಮುಗಿಯುತ್ತಿದೆ. ತಂಡಗಳ ಸಂಖ್ಯೆ 10ಕ್ಕೇರಿದರೆ, ಕನಿಷ್ಠ ಇನ್ನೊಂದು ತಿಂಗಳು ಕೂಟದ ಅವಧಿ ಹೆಚ್ಚುತ್ತದೆ. ಇದನ್ನು ನಿಭಾಯಿಸುವುದು ಬಿಸಿಸಿಐಗೆ ಸುಲಭವಲ್ಲ. ಸದ್ಯ ಐಪಿಎಲ್‌ ವೇಳೆ ಅಂತಾರಾಷ್ಟ್ರೀಯ ವೇಳಾಪಟ್ಟಿ ಇರದಂತೆ ಬಿಸಿಸಿಐ ಸಂಬಾಳಿಸುತ್ತಿದೆ. ಇನ್ನೂ ಒಂದು ತಿಂಗಳು ಅವಧಿಯನ್ನು ಹೆಚ್ಚಿಸಿದರೆ, ಆಗ ತಕರಾರು ಆರಂಭವಾಗುತ್ತದೆ. ಹಾಗೆಯೇ ವಿದೇಶಿ ಆಟಗಾರರು ತಮ್ಮ ದೇಶಕ್ಕೆ ಮರಳುತ್ತಾರೆ. ಅದರಿಂದ ಗುಣಮಟ್ಟ ಉಳಿಸಿಕೊಳ್ಳುವುದು ಕಷ್ಟ.

ಇದನ್ನೂ ಓದಿ:ಗೋಹತ್ಯೆ ನಿಷೇಧ ಕಾಯ್ದೆ: ಕರಂಬಳ್ಳಿಯಲ್ಲಿ ಮುಖ್ಯಮಂತ್ರಿಗಳಿಂದ ಗೋಪೂಜೆ

ಅದರ ಬದಲಿಗೆ ಸದ್ಯದ ಮಟ್ಟಿಗೆ 9 ತಂಡಗಳಿಗೆ ಸೀಮಿತ ಮಾಡಿದರೆ, 74 ಪಂದ್ಯಗಳಲ್ಲಿ ಕೂಟ ಮುಗಿಸಬಹುದು. ಈಗಲೂ 60 ದಿನಗಳೊಳಗೆ ಕೂಟ ಮುಗಿಸಲು ಸಾಧ್ಯ. 10 ತಂಡಗಳಿಗೆ ಏರಿಸಿದರೆ, ನಿಗದಿತ ಮಿತಿಯಲ್ಲಿ ಪಂದ್ಯಗಳನ್ನು ಮುಗಿಸಲು ಕೂಟದ ಸ್ವರೂಪವನ್ನೇ ಬಿಸಿಸಿಐ ಬದಲಿಸಬೇಕಾಗುತ್ತದೆ. ಆಗ ಮಾಧ್ಯಮ ಹಕ್ಕುಗಳಿಗಾಗಿ ಹೊಸತಾಗಿ ಟೆಂಡರ್‌ ಕರೆಯಬೇಕಾಗುತ್ತದೆ. ಇವೆಲ್ಲ ತಲೆಬಿಸಿಯ ಕೆಲಸ.

Advertisement

ಅದೇ 9 ತಂಡಗಳಿಗೆ ಮಾತ್ರ ಏರಿಸಿದರೆ ಪರಿಸ್ಥಿತಿಯನ್ನು ಅವಲೋಕಿಸಲು ಸಾಧ್ಯವಾಗುತ್ತದೆ. ನಿಧಾನಕ್ಕೆ ವಿಸ್ತರಿಸಲು ಏನೇನು ಮಾಡಬೇಕೆಂದು ತಿಳಿಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಬಿಸಿಸಿಐ, ಐಪಿಎಲ್‌ನಿಂದ ಬಹಳ ಹಿಂದೆಯೇ ಹೊರಹೋಗಿರುವ ಕೊಚ್ಚಿ ಟಸ್ಕರ್ಸ್‌, ಡೆಕ್ಕನ್‌ ಚಾರ್ಜರ್ಸ್‌ನಿಂದ ಎದುರಾದ ಕಾನೂನುಸಮಸ್ಯೆಗಳ ನೆನಪಿಟ್ಟುಕೊಂಡಿದೆ. ಅಂತಹ ಸಮಸ್ಯೆಗಳು ಮತ್ತೆ ಪುನರಾವರ್ತನೆಯಾಗಬಾರದು ಎಂಬ ಎಚ್ಚರಿಕೆಯನ್ನೂ ಹೊಂದಿದೆ.

ರಣಜಿಯೋ, ವಿಜಯ್‌ ಹಜಾರೆಯೋ? ನಿರ್ಧಾರವಿಲ್ಲ
ಬಿಸಿಸಿಐ ಉನ್ನತ ಸಮಿತಿ ಸಭೆ ಭಾನುವಾರ ಮುಗಿದಿದೆ. ಆದರೆ ರಣಜಿ ಟ್ರೋಫಿ ಯಾವಾಗ ಶುರುವಾಗುತ್ತದೆ ಎಂಬ ಯಾವುದೇ ನಿರ್ಧಾರವಾಗಿಲ್ಲ. ಮಾರ್ಚ್‌ನಿಂದ ದೇಶೀಯ ಮಹಿಳಾ ಕೂಟಗಳು ಶುರುವಾಗಲಿವೆ. ಹಾಗೆಯೇ ಅಂತಾರಾಷ್ಟ್ರೀಯ ಮಹಿಳಾ ಪಂದ್ಯಗಳಿಗೆ ಸಿದ್ಧವಾಗಲೂ ಯೋಜನೆಗಳು ಶುರುವಾಗಿವೆ.

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ರಣಜಿ ಆರಂಭಿಸಲು ಪೂರ್ಣ ಬದ್ಧರಾಗಿದ್ದಾರೆ. ಆದರೆ ಇತರೆ ಸದಸ್ಯರು, ವಿಜಯ್‌ ಹಜಾರೆಯತ್ತ ಒಲವು ತೋರಿದ್ದಾರೆ. 38 ತಂಡಗಳ ದೀರ್ಘ‌ಕಾಲೀನ ರಣಜಿ ಬದಲು, ವಿಜಯ್‌ ಹಜಾರೆ ಏಕದಿನ ಕೂಟ ನಡೆಸುವುದು ಸೂಕ್ತ ಎನ್ನುವುದು ಎಲ್ಲರ ಅಭಿಪ್ರಾಯ. ಆ ಬಗ್ಗೆ ಲೆಕ್ಕಾಚಾರಗಳು ನಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next