Advertisement

ಬಿಸಿಸಿಐ ಅನುದಾನ ಸ್ಥಗಿತ: ಕೆಎಸ್‌ಸಿಎಗೆ 7 ಕೋಟಿ ಬಾಕಿ

11:50 AM Mar 15, 2017 | |

ಬೆಂಗಳೂರು: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನೂ ವಿವಿಧ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಅನುದಾನವನ್ನೇ ಬಿಡುಗಡೆ ಮಾಡದೆ ಮೀನಮೇಷ ಎಣಿಸುತ್ತಿದೆ. ಈ ಬೆನ್ನಲ್ಲೇ ಕೆಲ ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಈ ಪಟ್ಟಿಯಲ್ಲಿ ಕೆಎಸ್‌ಸಿಎ(ರಾಜ್ಯ ಕ್ರಿಕೆಟ್‌ ಸಂಸ್ಥೆ ) ಕೂಡ ಸೇರಿಕೊಂಡಿದೆಎನ್ನುವುದು ಗಮನಾರ್ಹ ಸಂಗತಿ. ಕಳೆದ 1 ವರ್ಷದಿಂದ ಕೆಎಸ್‌ಸಿಎ ಹಲವಾರು ಟೂರ್ನಿಗಳನ್ನು ಆಯೋಜಿಸಿದೆ. ಇದರ ಒಟ್ಟು ಖರ್ಚು 7 ಕೋಟಿ ರೂ. ಇದು ಕ್ರಿಕೆಟ್‌ಗೆ ಸಂಬಂಧಿಸಿದ ಖರ್ಚು ವೆಚ್ಚಗಳು ಮಾತ್ರ. ಇಷ್ಟೊಂದು ಹಣವನ್ನು ಬಿಸಿಸಿಐ ಇನ್ನೂ ಮರು ಪಾವತಿ ಮಾಡಿಲ್ಲ. ಹಾಗೆ ಬಾಕಿ ಉಳಿಸಿಕೊಂಡಿದೆ ಎಂದು ರಾಜ್ಯ ಕ್ರಿಕೆಟ್‌ ಸಂಸ್ಥೆ ಜಂಟಿ ಕಾರ್ಯದರ್ಶಿ ಸಂತೋಷ್‌ ಮೆನನ್‌ ಉದಯವಾಣಿಗೆ
ತಿಳಿಸಿದ್ದಾರೆ.

Advertisement

ಅನುದಾನ ಬಿಡುಗಡೆ ಆಗದಿದ್ದರೆ ಕಷ್ಟ: ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಲೋಧಾ ಸಮಿತಿ ಹೇಳಿದ್ದ ಆಡಳಿತಾತ್ಮಕ ಶಿಫಾರಸುಗಳನ್ನು ಕೆಎಸ್‌ಸಿಎ ಅಳವಡಿಸಿಕೊಂಡಿದೆ.ಆಡಳಿತ ವ್ಯವಸ್ಥೆಯನ್ನು ನ್ಯಾಯಾಲಯದ ಆದೇಶದ ಪ್ರಕಾರವೇ ನಡೆಸಿದ್ದೇವೆ. ಹೀಗಿದ್ದರೂ ನಮಗೆ 2016-17ರ ಸಾಲಿನ ಹಣ ನಿಗದಿತ ಸಮಯಕ್ಕೆ ಬಿಡುಗಡೆ ಮಾಡಿಲ್ಲ. ರಾಜ್ಯ ಕ್ರಿಕೆಟ್‌ ಸಂಸ್ಥೆ ಸದ್ಯ ಆರ್ಥಿಕವಾಗಿ ಸದೃಢವಾಗಿದೆ. ಆದರೆ ಎಲ್ಲ ಕ್ರಿಕೆಟ್‌ ಸಂಸ್ಥೆಗಳು ಹೀಗೆ ಇರುತ್ತವೆ ಎಂದು ಹೇಳುವುದು ಕಷ್ಟ. ಇನ್ನಾದರೂ ಬಿಸಿಸಿಐ ಆಡಳಿತಾಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಮೆನನ್‌ ಹೇಳಿದ್ದಾರೆ.

ಲೋಧಾ ಶಿಫಾರಸುಗಳನ್ನು ಯಾವ ರಾಜ್ಯಸಂಸ್ಥೆಗಳು ಒಪ್ಪಿಕೊಳ್ಳುವುದಿಲ್ಲವೋ ಅವುಗಳಿಗೆ ಅನುದಾನ ಬಿಡುಗಡೆ ಮಾಡಬೇಡಿ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತ್ತು. ಶಿಫಾರಸನ್ನು ಅನುಷ್ಠಾನ ಮಾಡಿಸ ಲೆಂದೇ ನ್ಯಾಯಪೀಠ ವಿನೋದ್‌ ರಾಯ್‌ ನೇತೃತ್ವದಲ್ಲಿ ನೂತನ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ. ಆದರೆ ಕೆಎಸ್‌ಸಿಎ ತಾನು ಲೋಧಾ ಶಿಫಾರಸು ಅಳವಡಿಸಿ ಕೊಂಡಿದ್ದೇನೆ, ಆದ್ದರಿಂದ ಬಿಸಿಸಿಐ ಹಣ ಬಿಡುಗಡೆ
ಮಾಡದಿರುವುದಕ್ಕೆ ಅರ್ಥವಿಲ್ಲವೆನ್ನುವುದು ಎಂದು ಹೇಳಿಕೊಂಡಿದೆ.

ಬಿಸಿಸಿಐಗೆ ಪತ್ರ ಬರಿತೀವಿ
ಇನ್ನೂ ಮೂರು ದಿನದ ಒಳಗಾಗಿ ನಾವು ಬಿಸಿಸಿಐಗೆ ಪತ್ರ ಬರೆದು ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತೇವೆ. ಬಿಸಿಸಿಐ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ. ಯಾವುದೇ ಅನುದಾನ ಇಲ್ಲದೆ ಕ್ರಿಕೆಟ್‌ ಕೂಟಗಳನ್ನು ಆಯೋಜಿಸುವುದು ಕಷ್ಟ.
– ವಿನಯ್‌ ಮೃತ್ಯುಂಜಯ,
ಕೆಎಸ್‌ಸಿಎ ಮಾಧ್ಯಮ ವಕ್ತಾರ.

ರಾಜ್ಯ ರಣಜಿ ಕ್ರಿಕೆಟಿಗರಿಗೂ ಸಿಕ್ಕಿಲ್ಲ ಬಿಸಿಸಿಐ ಸಂಭಾವನೆ!
ಬಿಸಿಸಿಐ ಆಯೋಜಿಸಿದ ದೇಶೀಯ ಕ್ರಿಕೆಟ್‌ ಕೂಟಗಳಾದ ರಣಜಿ, ವಿಜಯ್‌ ಹಜಾರೆ, ಸೈಯದ್‌ ಮುಷ್ತಾಕ್‌ ಅಲಿ ಕೂಟಗಳಲ್ಲಿ ಆಡುವ ರಾಜ್ಯ ರಣಜಿ ತಂಡದ ಆಟಗಾರರಿಗೆ ಹಣ ನೀಡುವುದು ಬಿಸಿಸಿಐ ಜವಾಬ್ದಾರಿ. ಆದರೆ ಕಳೆದ ಒಂದು ವರ್ಷದಿಂದ ಈ ಕೂಟಗಳಲ್ಲಿ ಆಡಿದ ಕ್ರಿಕೆಟಿಗರ ಖಾತೆಗೆ ಇನ್ನೂ
ಹಣ ಬಿದ್ದಿಲ್ಲ. ಬಿಸಿಸಿಐ ನೇರವಾಗಿ ಈ ಹಣ ಜಮೆ ಮಾಡಬೇಕಿತ್ತು. ಇದರಿಂದ ಕೆಲ ಕ್ರಿಕೆಟಿಗರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. 

Advertisement

ಹಣ ಬಿಡುಗಡೆ ಮಾಡಿ: ಬಿಸಿಸಿಐಗೆ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಒತ್ತಾಯ
ಮುಂಬೈ
: ಬಿಸಿಸಿಐಗೆ ಆಡಳಿತಾಧಿಕಾ ರಿಗಳು ನೇಮಕಗೊಂಡ ಬಳಿಕ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಆಗಿಲ್ಲ ಎನ್ನುವ ದೂರು ಕೇಳಿ ಬರುತ್ತಿವೆ. ಇದೀಗ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ (ಎಸ್‌ಸಿಎ) ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ. ಪತ್ರ ಮೂಲಕ ಬಿಸಿಸಿಐಗೆ ಮನವಿ ಸಲ್ಲಿಸಿದೆ. ಜತೆಗೆ ದೇಶಿ ಪಂದ್ಯಗಳನ್ನು ಆಡಿದ ತನ್ನ ರಾಜ್ಯದ ಕ್ರಿಕೆಟಿಗರಿಗೂ ಹಣ ನೀಡುವಂತೆ ತಿಳಿಸಿದೆ.

– ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next