ಬೆಂಗಳೂರು: ಏಕದಿನ ವಿಶ್ವಕಪ್ ಗೆ ಕೆಲವೇ ತಿಂಗಳು ಬಾಕಿ ಉಳಿದಿರುವಂತೆ ಎಲ್ಲಾ ತಂಡಗಳು ಸಿದ್ದತೆ ನಡೆಸುತ್ತಿವೆ. ಆದರೆ ಭಾರತ ತಂಡದ ಪ್ರಮುಖ ಕೆಲವು ಆಟಗಾರರು ಗಾಯದ ಕಾರಣ ದೀರ್ಘಕಾಲದಿಂದ ಆಟದಿಂದ ಹೊರಗಿದ್ದಾರೆ. ಬುಮ್ರಾ, ರಾಹುಲ್ ಸೇರಿ ತಂಡದ ಪ್ರಮುಖ ಸದಸ್ಯರು ಯಾವಾಗ ತಂಡಕ್ಕೆ ಮರಳುತ್ತಾರೆ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಸದ್ಯ ಬಿಸಿಸಿಐ ಈ ಆಟಗಾರರ ಫಿಟ್ನೆಸ್ ಮತ್ತು ಮೆಡಿಕಲ್ ರಿಪೋರ್ಟ್ ಬಹಿರಂಗಪಡಿಸಿದೆ. ಅದು ಈ ಕೆಳಗಿನಂತಿದೆ.
ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ: ಇಬ್ಬರು ವೇಗದ ಬೌಲರ್‌ಗಳು ತಮ್ಮ ಪುನರ್ವಸತಿಯ ಅಂತಿಮ ಹಂತದಲ್ಲಿದ್ದಾರೆ ಮತ್ತು ನೆಟ್ಸ್‌ನಲ್ಲಿ ಪೂರ್ಣ ತೀವ್ರತೆಯಿಂದ ಬೌಲಿಂಗ್ ಮಾಡುತ್ತಿದ್ದಾರೆ. ಇವರಿಬ್ಬರು ಈಗ ಕೆಲವು ಅಭ್ಯಾಸ ಆಟಗಳನ್ನು ಆಡುತ್ತಾರೆ, ಅದನ್ನು ಎನ್ ಸಿಎ ಆಯೋಜಿಸುತ್ತದೆ. ಬಿಸಿಸಿಐ ವೈದ್ಯಕೀಯ ತಂಡವು ಅವರ ಪ್ರಗತಿಯಿಂದ ಸಂತಸಗೊಂಡಿದೆ. ಅಭ್ಯಾಸ ಪಂದ್ಯಗಳ ನಂತರ ಅವರನ್ನು ಮೌಲ್ಯಮಾಪನ ಮಾಡಿದ ಬಳಿಕ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.
ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್: ಇವರಿಬ್ಬರು ನೆಟ್ಸ್ ನಲ್ಲಿ ಬ್ಯಾಟಿಂಗನ್ನು ಪುನರಾರಂಭಿಸಿದ್ದಾರೆ. ಪ್ರಸ್ತುತ ಫಿಟ್‌ನೆಸ್ ಡ್ರಿಲ್ ಗಳಿಗೆ ಒಳಗಾಗುತ್ತಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡವು ಅವರ ಪ್ರಗತಿಯಿಂದ ತೃಪ್ತವಾಗಿದೆ. ಮುಂಬರುವ ದಿನಗಳಲ್ಲಿ ಕೌಶಲ್ಯ ಮತ್ತು ಸಾಮರ್ಥ್ಯ ಮತ್ತು ಕಂಡೀಷನಿಂಗ್ ಎರಡರಲ್ಲೂ ಅವರ ತೀವ್ರತೆಯನ್ನು ಹೆಚ್ಚಿಸುತ್ತದೆ.
ರಿಷಬ್ ಪಂತ್: ಅವರು ತಮ್ಮ ಪುನರ್ವಸತಿಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದಾರೆ. ಬ್ಯಾಟಿಂಗ್ ಮತ್ತು ನೆಟ್ ನಲ್ಲಿ ಕೀಪಿಂಗ್ ಪ್ರಾರಂಭಿಸಿದ್ದಾರೆ. ಸಾಮರ್ಥ್ಯ ಮತ್ತು ಓಟವನ್ನು ಒಳಗೊಂಡಿರುವ ಫಿಟ್ ನೆಸ್ ಪ್ರೋಗ್ರಾಂನ್ನು ಅವರು ಪ್ರಸ್ತುತ ಅನುಸರಿಸುತ್ತಿದ್ದಾರೆ.