Advertisement

ಸುಪ್ರೀಂ ಇನ್ನಿಂಗ್ಸ್‌ ಅಂತ್ಯ; ಅ. 22ಕ್ಕೆ ಬಿಸಿಸಿಐ ಚುನಾವಣೆ

10:18 AM May 22, 2019 | Team Udayavani |

ಹೊಸದಿಲ್ಲಿ : ಸತತ 2 ವರ್ಷಗಳಿಂದ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) ನಡೆಯುತ್ತಿದ್ದ ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳ ಆಡಳಿತ ಕೊನೆಗೊಳ್ಳುವುದು ಸನ್ನಿಹಿತವಾಗಿದೆ. ಅಕ್ಟೋಬರ್‌ 22ಕ್ಕೆ ಬಿಸಿಸಿಐಗೆ ಚುನಾವಣೆ ನಡೆಸಲಾಗುವುದು ಎಂದು ಮುಖ್ಯ ಆಡಳಿತಾಧಿಕಾರಿ ವಿನೋದ್‌ ರಾಯ್‌ ಘೋಷಿಸಿದ್ದಾರೆ. ಇದಕ್ಕೂ ಮುನ್ನ ಅಂದರೆ ಸೆ.14ರ ವೇಳೆ ಎಲ್ಲ ರಾಜ್ಯ ಸಂಸ್ಥೆಗಳ ಚುನಾವಣೆ ನಡೆಯಲಿದೆ.

Advertisement

2017, ಜನವರಿಯಲ್ಲಿ ಸರ್ವೋಚ್ಚ ನ್ಯಾಯಾಲಯ, ಅಂದಿನ ಬಿಸಿಸಿಐ ಅಧ್ಯಕ್ಷ ಅನುರಾಗ್‌ ಠಾಕೂರ್‌, ಕಾರ್ಯದರ್ಶಿ ಅಜಯ್‌ ಶಿರ್ಕೆಯನ್ನು ವಜಾ ಮಾಡಿ, ಆಡಳಿ ತಾಧಿಕಾರಿಗಳನ್ನು ನೇಮಿಸಿತ್ತು. ಸರ್ವೋಚ್ಚ ನ್ಯಾಯಾಲಯ ನೇಮಿಸಿದ್ದ ಲೋಧಾ ಸಮಿತಿ, ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್‌ ಸಂಸ್ಥೆಗಳನ್ನು ದೀರ್ಘ‌ ಅಧ್ಯಯನಕ್ಕೊಳಪಡಿಸಿ, ಹಲವು ಆಡಳಿ ತಾತ್ಮಕ ಬದಲಾವಣೆಗಳನ್ನು ಘೋಷಿಸಿತ್ತು. ಇದನ್ನು ಗಡುವಿನೊಳಗೆ ಜಾರಿ ಮಾಡಲು ವಿಫ‌ಲವಾದ ಕಾರಣ, ಸರ್ವೋಚ್ಚ ನ್ಯಾಯಾಲಯ ಪದಾಧಿಕಾರಿಗಳನ್ನು ವಜಾ ಮಾಡುವ ಕಠಿನ ಕ್ರಮ ಘೋಷಿಸಿತ್ತು.

ಬಗೆಹರಿದ ತೊಡಕುಗಳು
70 ವಯೋಮಿತಿ ಮೀರಿದ ಪದಾಧಿಕಾರಿಗಳಿಗೆ ಅಧಿಕಾರವಿಲ್ಲ, ಒಂದು ಸಂಸ್ಥೆಯಲ್ಲಿ (ರಾಜ್ಯ ಅಥವಾ ಬಿಸಿಸಿಐ) ತಲಾ 9 ವರ್ಷ ಮಾತ್ರ ಅಧಿಕಾರವಧಿ, ಒಮ್ಮೆ ಪದಾಧಿಕಾರಿಯಾದರೆ 3 ವರ್ಷದ ಅನಂತರ ಮುಂದಿನ 3 ವರ್ಷ ಕಡ್ಡಾಯ ವಿಶ್ರಾಂತಿ ಪಡೆಯಲೇಬೇಕು, ಒಂದು ರಾಜ್ಯದಲ್ಲಿ ಎಷ್ಟೇ ಮುಖ್ಯ ಕ್ರಿಕೆಟ್‌ ಸಂಸ್ಥೆಗಳಿರಲಿ, ಬಿಸಿಸಿಐಯಲ್ಲಿ ಒಂದು ಮತಕ್ಕೆ ಮಾತ್ರ ಅವಕಾಶ…ಹೀಗೆ ಹಲವು ಶಿಫಾರಸುಗಳನ್ನು ಮಾಡಲಾಗಿತ್ತು. ಇದು ಭಾರೀ ವಿರೋಧಕ್ಕೆ ಕಾರಣವಾಗಿತ್ತು.

ಆದರೆ ಸರ್ವೋಚ್ಚ ನ್ಯಾಯಾಲಯದ ತನ್ನ ಅಭಿಪ್ರಾಯದಲ್ಲಿ ಬದಲಾವಣೆ ಮಾಡಿಕೊಳ್ಳ ಲಾಗದ ಕಾರಣ ಬಿಸಿಸಿಐ ಮತ್ತು ಅದರ ಅಂಗಸಂಸ್ಥೆಗಳು ಎಲ್ಲವನ್ನೂ ಅಂಗೀಕರಿಸಿವೆ. ಆದರೆ ಕೆಲವು ಸಣ್ಣಪುಟ್ಟ ಬದಲಾ ವಣೆಗಳು ಸಂಭವಿಸಿವೆ. ಮುಖ್ಯವಾಗಿ ಬಿಸಿಸಿಐನ ಸರ್ವೋಚ್ಚ ಸಮಿತಿಯಲ್ಲಿ 9 ಮಂದಿಗೆ ಮಾತ್ರ ಸದಸ್ಯರಾಗಿರಲು ಅವಕಾಶವಿದೆ. ಇದನ್ನೇ ರಾಜ್ಯ ಸಂಸ್ಥೆಗಳು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅವುಗಳಿಗೆ ಗರಿಷ್ಠ 18 ಮಂದಿಯನ್ನು ಹೊಂದಲು ಅವಕಾಶ ನೀಡಲಾಗಿದೆ ಎಂದು ವಿನೋದ್‌ ರಾಯ್‌ ವಿವರಿಸಿದ್ದಾರೆ.
ಕೆಲವು ದಿನಗಳ ಹಿಂದೆ ಅಮಿಕಸ್‌ ಕ್ಯೂರಿ ಪಿ.ಎಸ್‌. ನರಸಿಂಹ ಸರ್ವೋಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ಬಿಸಿಸಿಐಯನ್ನು ಚುನಾಯಿತ ಮಂಡಳಿ ಮಾತ್ರ ನಡೆಸಬೇಕು. ಉಳಿದವರ್ಯಾರಿಗೂ ನಡೆಸಲು ಅಧಿಕಾರವಿಲ್ಲ ಎಂದು ಹೇಳಿದ್ದರು. ಆಗಲೇ ಚುನಾವಣೆ ದಿನಾಂಕ ನಿಗದಿಯಾಗುವ ಸುಳಿವು ಸಿಕ್ಕಿತ್ತು. ಇದೀಗ ಸತ್ಯವಾಗಿದೆ.

ನಿರಂತರ ಘರ್ಷಣೆ
ನ್ಯಾಯಾಲಯದ ನಿರ್ಧಾರದಿಂದ ನಿರಂತರವಾಗಿ ಬಿಸಿಸಿಐ ಪದಾಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳ ನಡುವೆ ಘರ್ಷಣೆ ಸಂಭವಿಸಿತ್ತು. ಇದೆಲ್ಲದರ ನಡುವೆಯೇ ಎಲ್ಲ ರಾಜ್ಯ ಕ್ರಿಕೆಟ್‌ ಸಂಸ್ಥೆಗಳೂ ನೂತನ ಸಂವಿಧಾನವನ್ನು ಅಳವಡಿಸಿಕೊಳ್ಳಲು ಒಪ್ಪಿವೆ. ಇನ್ನು ಹೊಸತಾಗಿ ರಚನೆಯಾದ ಕೆಲವೇ ಕೆಲವು ರಾಜ್ಯ ಸಂಸ್ಥೆಗಳು ಅದನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿವೆ. ಪರಿಸ್ಥಿತಿ ಯಲ್ಲಾದ ಬದಲಾವಣೆಗಳನ್ನು ಗಮನಿಸಿರುವ ಆಡಳಿತಾಧಿಕಾರಿಗಳು ಮಂಗಳವಾರ ಸಭೆ ನಡೆಸಿ, ಚುನಾವಣೆ ದಿನಾಂಕವನ್ನು ಘೋಷಿಸಿದ್ದಾರೆ.

Advertisement

“ರಾತ್ರಿ ಕಾವಲುಗಾರ’ನ ದೀರ್ಘ‌ ಇನ್ನಿಂಗ್ಸ್‌


ಮುಖ್ಯ ಆಡಳಿತಾಧಿಕಾರಿ ವಿನೋದ್‌ ರಾಯ್‌, ಸದಸ್ಯರಾದ ಡಯಾನ ಎಡುಲ್ಜಿ, ರವಿ ಥಾಡೆ ಮಂಗಳವಾರ ಸಭೆ ನಡೆಸಿದರು.  ಈ ವೇಳೆ ಮಾತನಾಡಿದ ವಿನೋದ್‌, “ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾಯಿತ ವ್ಯಕ್ತಿಗಳೇ ದೇಶದ ಕ್ರಿಕೆಟ್‌ ವ್ಯವಸ್ಥೆಯನ್ನು ನಡೆಸಬೇಕೆನ್ನುವುದು ನಮ್ಮ ಬಲವಾದ ನಂಬಿಕೆ. ಈಗ ಪರಿಸ್ಥಿತಿ ಪಕ್ವಗೊಂಡಿದ್ದರಿಂದ ಮತ್ತೆ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಆದ್ದರಿಂದ ನಾನೀಗ ಬಹಳ ಸಂತೋಷದಲ್ಲಿದ್ದೇನೆ.

ನಾನು ಇಲ್ಲಿಗೆ ರಾತ್ರಿ ಕಾವಲುಗಾರನಾಗಿ ಬಂದೆ (ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನ್ನೇನು ದಿನದಾಟ ಮುಗಿಯುವಾಗ ವಿಕೆಟ್‌ ಬಿದ್ದರೆ ಆಗ ಬೌಲರ್‌ರೊಬ್ಬರನ್ನು ಬ್ಯಾಟಿಂಗ್‌ಗೆ ಕಳುಹಿಸಲಾಗುತ್ತದೆ. ಇದಕ್ಕೆ ನೈಟ್‌ ವಾಚ್‌ಮನ್‌ ಎನ್ನಲಾಗುತ್ತದೆ). ಆದರೆ ದೀರ್ಘ‌ಕಾಲ ಕ್ರೀಸ್‌ನಲ್ಲಿ ನಿಂತೆ. ನಮ್ಮ ಕೆಲಸ ಏನು ಎನ್ನುವುದು ಖಚಿತವಾಗಿತ್ತು. ಎಲ್ಲ ರಾಜ್ಯ ಸಂಸ್ಥೆಗಳು ಹೊಸ ಸಂವಿಧಾನವನ್ನು ಅಳವಡಿಸಿಕೊಳ್ಳುವಂತೆ ನಾವು ಮಾಡಬೇಕಿತ್ತು. ಇದರಲ್ಲಿ ಕೆಲವು ತೊಡಕುಗಳಿದ್ದವು. ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next