ಮುಂಬೈ: ಕೆಲವೇ ದಿನಗಳ ಹಿಂದೆಯಷ್ಟೇ ಐಪಿಎಲ್ 2024ರ ದ್ವಿತೀಯಾರ್ಧದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದ ಬಿಸಿಸಿಐ ಇದೀಗ ಎರಡು ಪಂದ್ಯಗಳ ದಿನಾಂಕಗಳಲ್ಲಿ ಬದಲಾವಣೆ ಮಾಡಿದೆ. ಕೋಲ್ಕತ್ತಾ ಮತ್ತು ರಾಜಸ್ತಾನ ನಡುವಿನ ಪಂದ್ಯ ಹಾಗೂ ಗುಜರಾತ್ ಮತ್ತು ಡೆಲ್ಲಿ ನಡುವಿನ ಪಂದ್ಯದಲ್ಲಿ ಬದಲಾವಣೆ ಮಾಡಲಾಗಿದೆ.
ಇದೇ ತಿಂಗಳ 17ರಂದು ಕೆಕೆಆರ್-ರಾಜಸ್ಥಾನ್ ನಡುವಿನ ಪಂದ್ಯವು ಕೋಲ್ಕತಾದಲ್ಲಿ ನಡೆಯಬೇಕಿತ್ತು. ಆದರೆ ಅಂದು ರಾಮನವಮಿ ಆದ್ದರಿಂದ ಹಾಗೂ ಎ. 19ರಂದು ಪಶ್ಚಿಮ ಬಂಗಾಲದಲ್ಲಿ ಮೊದಲ ಹಂತದ ಚುನಾವಣೆ ನಡೆಯುವುದರಿಂದ ಪಂದ್ಯಕ್ಕೆ ಸೂಕ್ತ ಭದ್ರತೆ ಒದಗಿಸಲು ಸಾಧ್ಯವಾಗದು ಎಂಬುದಾಗಿ ಪೊಲೀಸ್ ಇಲಾಖೆ ಬಂಗಾಲ ಕ್ರಿಕೆಟ್ ಮಂಡಳಿ (ಸಿಎಬಿ) ಸೂಚಿಸಿದೆ. ಸಿಎಬಿ ಅಧ್ಯಕ್ಷ ಸ್ನೇಹಶಿಷ್ ಗಂಗೂಲಿ ಇದನ್ನು ಬಿಸಿಸಿಐ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಬದಲಾವಣೆ ಮಾಡಲಾಗಿದೆ.
ಇದೀಗ ಕೆಕೆಆರ್- ಆರ್ ಆರ್ ಪಂದ್ಯವನ್ನು ಒಂದು ದಿನ ಮುಂಚಿತವಾಗಿ ಅಂದರೆ ಎ.16ರಂದು ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಈ ಹಿಂದೆ ಎ.16ರಂದು ನಿಗದಿಯಾಗಿದ್ದ ಗುಜರಾತ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ಎ.17ರಂದು ನಡೆಯಲಿದೆ. ಈ ಬಗ್ಗೆ ಬಿಸಿಸಿಐ ಇಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಸಿಸಿಐ ಈ ಹಿಂದೆ ಎರಡು ಹಂತಗಳಲ್ಲಿ ಐಪಿಎಲ್ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಆರಂಭದಲ್ಲಿ ಮೊದಲ 21 ಪಂದ್ಯಗಳ ಪಟ್ಟಿ ಮತ್ತು ಸಾರ್ವತ್ರಿಕ ಚುನಾವಣಾ ವೇಳಾಪಟ್ಟಿಯ ಘೋಷಣೆಯ ನಂತರ ಉಳಿದ 53 ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಮೇ 26 ರಂದು ಚೆನ್ನೈನಲ್ಲಿ ಐಪಿಎಲ್ ಫೈನಲ್ ಪಂದ್ಯ ಆಯೋಜಿಸಲಾಗುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ ತವರು ಎಂ.ಎ. ಚಿದಂಬರಂ ಕ್ರೀಡಾಂಗಣವು ಐಪಿಎಲ್ ಫೈನಲ್ ಗೆ 2011 ಮತ್ತು 2012 ರಲ್ಲಿ ಎರಡು ಬಾರಿ ಆತಿಥ್ಯ ವಹಿಸಿದೆ.