ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ ಆರಂಭಿಕ ಪಂದ್ಯದಲ್ಲಿ ಸೋಲನುಭವಿಸಿದರೂ, ತಮ್ಮ ಒಂದು ನಡೆಯಿಂದ ಅಭಿಮಾನಿಗಳ ಗಮನ ಸೆಳೆದಿತ್ತು. ಅಪಘಾತದಲ್ಲಿ ಗಾಯಗೊಂಡಿರುವ ರಿಷಭ್ ಪಂತ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಡೆಲ್ಲಿ ಕ್ಯಾಪಿಟಲ್ಸ್ ಪಂತ್ ಅವರ ಜೆರ್ಸಿಯನ್ನು ಡಗೌಟ್ ನಲ್ಲಿರಿಸಿತ್ತು.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ತಮ್ಮ ನಾಯಕನ ಜರ್ಸಿ ನಂ. 17 ಅನ್ನು ಡಗೌಟ್ ಛಾವಣಿಯ ಮೇಲೆ ನೇತು ಹಾಕಿ, ಪಂತ್ ಯಾವಾಗಲೂ ತಂಡದೊಂದಿಗೆ ಉತ್ಸಾಹದಿಂದ ಇರುತ್ತಾರೆ ಎಂಬ ಸೂಚಿಸಿತ್ತು.
ಆದರೆ, ಬಿಸಿಸಿಐ ಈ ನಡೆಯಿಂದ ಅಸಮಾಧಾನಗೊಂಡಿದೆ ಎಂದು ಐಪಿಎಲ್ ಮೂಲವೊಂದು ಪಿಟಿಐಗೆ ತಿಳಿಸಿದೆ.
“ಇದು ಸ್ವಲ್ಪ ಅತಿರೇಕವಾದಂತೆ ತೋರುತ್ತಿದೆ. ದುರಂತ ಅಥವಾ ನಿವೃತ್ತಿಯ ಸಂದರ್ಭದಲ್ಲಿ ಮಾತ್ರ ಇಂತಹ ಗೌರವ ಮಾಡಬಹುದಾಗಿದೆ. ಈ ಸಂದರ್ಭದಲ್ಲಿ, ಅದು ಎರಡೂ ಅಲ್ಲ. ರಿಷಭ್ ಚೆನ್ನಾಗಿ ಮತ್ತು ನಿಜವಾಗಿಯೂ ಅವರು ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಹಾಗಾಗಿ ಉದಾತ್ತ ಉದ್ದೇಶದಿಂದ ಮಾಡಲಾಗಿದೆಯಾದರೂ ಬಿಸಿಸಿಐ ಫ್ರಾಂಚೈಸಿಗೆ ಭವಿಷ್ಯದಲ್ಲಿ ಇಂತಹ ನಡೆಯನ್ನು ತಪ್ಪಿಸುವಂತೆ ನಯವಾಗಿ ಹೇಳಿದೆ” ಎಂದು ಐಪಿಎಲ್ ಮೂಲಗಳು ತಿಳಿಸಿವೆ.
ಡೆಲ್ಲಿ ಕ್ಯಾಪಿಟಲ್ಸ್ ತನ್ನ ಎರಡನೇ ಪಂದ್ಯವನ್ನು ಇಂದು ಆಡಲಿದೆ. ಡೆಲ್ಲಿಯಲ್ಲಿ ನಡೆಯುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.