ಹೊಸದಿಲ್ಲಿ: ಬಿಸಿಸಿಐ ಬುಧವಾರ ಪ್ರಕಟಿಸಿದ ಕ್ರಿಕೆಟಿಗರ ನೂತನ ಒಡಂಬಡಿಕೆಯಲ್ಲಿ ವನಿತಾ ಕ್ರಿಕೆಟಿಗರಿಗೆ ಅನ್ಯಾಯವಾಗಿದೆ ಎಂಬ ಕೂಗೆದ್ದಿದೆ.
ಪುರುಷರ ಕ್ರಿಕೆಟಿಗರಿಗೆ ಇದೇ ಮೊದಲ ಬಾರಿಗೆ ನೂತನ “ಎ ಪ್ಲಸ್’ ಶ್ರೇಣಿಯನ್ನು ರೂಪಿಸಲಾಗಿದ್ದು, ವನಿತೆಯರನ್ನು ಅದೇ ಹಳೆಯ ಎ, ಬಿ, ಸಿ ವಿಭಾಗಗಳಲ್ಲೇ ಮುಂದುವರಿಸಲಾಗಿದೆ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅಗ್ರ ಶ್ರೇಣಿಯ ಪುರುಷರಿಗೆ ಲಭಿಸಿದ ಶೇ. 7ರಷ್ಟು ವೇತನವಷ್ಟೇ ವನಿತಾ ಅಗ್ರ ಶ್ರೇಣಿಯ ಆಟಗಾರ್ತಿಯರಿಗೆ ಲಭಿಸುತ್ತದೆ.
ಆದರೆ 2017-18ರ ಕ್ರಿಕೆಟ್ ಸಾಧನೆಯನ್ನು ಅವಲೋಕಿಸುವಾಗ ವನಿತೆಯರ ಸಾಧನೆ ಪುರುಷರಿಗೆ ಕಡಿಮೆಯೇನೂ ಇಲ್ಲವೆಂಬುದು ಸಾಬೀತಾಗುತ್ತದೆ.
ಭಾರತದ ಪುರುಷರ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ಥಾನಕ್ಕೆ ಹೀನಾಯವಾಗಿ ಸೋತರೆ, ವನಿತೆಯರು ಐಸಿಸಿ ವಿಶ್ವಕಪ್ ಟ್ರೋಫಿಯನ್ನು ಸ್ವಲ್ಪದರಲ್ಲೇ ಕಳೆದುಕೊಂಡಿದ್ದರು. ಮೊನ್ನೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಎರಡೂ ತಂಡಗಳ ಪ್ರದರ್ಶನ ಉನ್ನತ ಮಟ್ಟದಲ್ಲಿತ್ತು. ಎರಡೂ ತಂಡಗಳು ಏಕದಿನ ಹಾಗೂ ಟಿ20 ಸರಣಿಯನ್ನು ಜಯಿಸಿದ್ದವು. ಆದರೆ ನೂತನ ವರ್ಗೀಕೃತ ಶ್ರೇಣಿಯಲ್ಲಿ ವಿರಾಟ್ ಕೊಹ್ಲಿ ವಾರ್ಷಿಕ 7 ಕೋಟಿ ರೂ. ವೇತನ ಪಡೆದರೆ, ವನಿತಾ ತಂಡದ ನಾಯಕಿ ಮಿಥಾಲಿ ರಾಜ್‌ಗೆ ಲಭಿಸುವುದು 50 ಲಕ್ಷ ರೂ. ಮಾತ್ರ!
ಬಿ ಮತ್ತು ಸಿ ದರ್ಜೆಯ ವನಿತಾ ಆಟಗಾರ್ತಿಯರಿಗೆ ಕ್ರಮವಾಗಿ 30 ಲಕ್ಷ ರೂ. ಹಾಗೂ 10 ಲಕ್ಷ ರೂ. ವೇತನವಷ್ಟೇ ನೀಡಲಾಗುತ್ತಿದೆ. ಆದರೆ ಯಾವುದೇ ಶ್ರೇಣಿಯಲ್ಲಿ ಪುರುಷ ಕ್ರಿಕೆಟಿಗರ ವೇತನ ಒಂದು ಕೋ.ರೂ.ಗಿಂತ ಕಡಿಮೆ ಇಲ್ಲವೇ ಇಲ್ಲ! ಎರಡೂ ತಂಡಗಳ ಆಟಗಾರರು ಗೆಲುವಿಗಾಗಿ ಏಕರೀತಿಯ ಶ್ರಮ ಹಾಕಿದರೂ ಲಭಿಸುವ ವೇತನದಲ್ಲಿ ಮಾತ್ರ ಭಾರೀ ತಾರತಮ್ಯ ಎಸಗಲಾಗಿದೆ ಎಂದು ದೂರಲಾಗಿದೆ. ವನಿತಾ ಕ್ರಿಕೆಟಿಗರಿಗೆ ಎಸಗಲಾಗುತ್ತಿರುವ ಈ ವೇತನ ತಾರತಮ್ಯಕ್ಕೆ ದೇಶದ ಅನೇಕ ಮಹಿಳಾ ಕ್ರಿಕೆಟ್ ಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸಿವೆ.