ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಪುರುಷ ಮತ್ತು ಮಹಿಳಾ ಆಟಗಾರರ ವಾರ್ಷಿಕ ವೇತನ ಪರಿಷ್ಕರಣೆಯಾಗಿದ್ದು ವೇಗಿ ಜಸ್ಪ್ರೀತ್ ಬುಮ್ರಾ ಎ ಪ್ಲಸ್ ದರ್ಜೆಗೇರಿದ್ದಾರೆ. ಯುವ ವಿಕೆಟ್ ಕೀಪರ್ ರಿಷಭ್ ಪಂತ್ ‘ಎ’ ದರ್ಜೆ ಪಡೆದು ಅಚ್ಚರಿ ಮೂಡಿಸಿದ್ದಾರೆ. ಉಳಿದಂತೆ ಇತ್ತೀಚೆಗೆ ವಿವದಾತ್ಮಕ ಹೇಳಿಕೆಯಿಂದಲೇ ಸುದ್ದಿಯಾದ ಕೆ.ಎಲ್.ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಾ ‘ಬಿ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಎ ಪ್ಲಸ್ ಗ್ರೇಡ್ ಪಡೆದಿದ್ದು ಬುಮ್ರಾ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
ಈ ಮೂವರು ಆಟಗಾರರು ವಾರ್ಷಿಕವಾಗಿ ಏಳು ಕೋಟಿ ಸಂಭಾವನೆ ಪಡೆಯಲಿದ್ದಾರೆ.
ಕಳೆದ ವರ್ಷ ಎ ಪ್ಲಸ್ ದರ್ಜೆಯ ಸಂಭಾವನೆ ಪಟ್ಟಿಯಲ್ಲಿದ್ದ ಶಿಖರ್ ಧವನ್ ಮತ್ತು ಭುವನೇಶ್ವರ್ ಕುಮಾರ್ ಈಗ ‘ಎ’ ದರ್ಜೆಗೆ ಜಾರಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಬಲಳುತ್ತಿರುವ ಭುವಿ ಮತ್ತು ಧವನ್ ಉತ್ತಮ ಪ್ರದರ್ಶನ ನೀಡಲು ವಿಫಲರಾದ ಹಿನ್ನಲೆಯಲ್ಲಿ ಈ ಇಬ್ಬರು ಆಟಗಾರರಿಗೆ ಹಿಂಬಡ್ತಿ ನೀಡಲಾಗಿದೆ.
ವಾರ್ಷಿಕವಾಗಿ ಐದು ಕೋಟಿ ಸಂಭಾವನೆ ಪಡೆಯಲಿರುವ ‘ಎ’ ಪಟ್ಟಿಯಲ್ಲಿರುವ ಇತರ ಆಟಗಾರರು ಯಾರೆಂದರೆ, ರವಿ ಅಶ್ವಿನ್, ರವೀಂದ್ರ ಜಡೇಜಾ, ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ, ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಧಮಿ, ಇಶಾಂತ್ ಶರ್ಮಾ, ಕುಲದೀಪ್ ಯಾದವ್ ಮತ್ತು ರಿಷಭ್ ಪಂತ್. ಇವರಲ್ಲಿ ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಮತ್ತು ಕುಲದೀಪ್ ಯಾದವ್ ಕಳೆದ ವರ್ಷ ‘ಬಿ’ ಗ್ರೇಡ್ ನಲ್ಲಿದ್ದರು.
ವಾರ್ಷಿಕ ತಲಾ ಮೂರು ಕೋಟಿ ವೇತನ ಪಡೆಯಲಿರುವ ‘ಬಿ ದರ್ಜೆಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್, ಉಮೇಶ್ ಯಾದವ್, ಯುಜುವೇಂದ್ರ ಚಾಹಲ್ ಮತ್ತು ಹಾರ್ದಿಕ್ ಪಾಂಡ್ಯ ಸ್ಥಾನ ಪಡೆದಿದ್ದಾರೆ. ಹಾಗೇ ‘ಸಿ’ ಗುಂಪಿನಲ್ಲಿ ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಅಂಬಾಟಿ ರಾಯುಡು, ಮನೀಶ್ ಪಾಂಡೆ, ಹನುಮ ವಿಹಾರಿ, ಖಲೀಲ್ ಅಹಮದ್ ಮತ್ತು ವೃದ್ಧಿಮಾನ್ ಸಾಹ ಸ್ಥಾನ ಪಡೆದಿದ್ದಾರೆ. ಇವರು ವಾರ್ಷಿಕ ತಲಾ ಒಂದು ಕೋಟಿ ವೇತನ ಪಡೆಯಲಿದ್ದಾರೆ.
ಕಳೆದ ವರ್ಷದ ಪಟ್ಟಿಯಲ್ಲಿದ್ದ ಅಕ್ಷರ್ ಪಟೇಲ್, ಕರುಣ್ ನಾಯರ್, ಸುರೇಶ್ ರೈನಾ, ಪಾರ್ಥೀವ್ ಪಟೇಲ್, ಜಯಂತ್ ಯಾದವ್ ರನ್ನು ಈ ಪಟ್ಟಿಯಿಂದ ಕೈ ಬಿಡಲಾಗಿದೆ. ಇವರೊಂದಿಗೆ ಕಳೆದ ವರ್ಷ ‘ಎ’ ಪಟ್ಟಿಯಲ್ಲಿದ್ದ ಮುರಳಿ ವಿಜಯ್ ಕೂಡಾ ಈ ವರ್ಷದ ಗುತ್ತಿಗೆಯಲ್ಲಿ ಸ್ಥಾನ ಪಡೆದಿಲ್ಲ. ಇವರೊಂದಿಗೆ ಸದ್ಯ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ವಿಜಯ್ ಶಂಕರ್, ಪೃಥ್ವಿ ಶಾ, ಮಯಾಂಕ್ ಅಗರ್ವಾಲ್ ಅವರನ್ನು ಪಟ್ಟಿಗೆ ಸೇರಿಸಿಕೊಂಡಿಲ್ಲ.
ಮಹಿಳಾ ಪಟ್ಟಿ
ಮಹಿಳಾ ಆಟಗಾರ್ತಿಯರ ಅಗ್ರ ಪಟ್ಟಿಯಲ್ಲಿ ಮಿಥಾಲಿ ರಾಜ್, ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧನಾ ಮತ್ತು ಪೂನಂ ಯಾದವ್ ಇದ್ದಾರೆ. ಈ ನಾಲ್ವರು ಆಟಗಾರರು ವಾರ್ಷಿಕವಾಗಿ 50 ಲಕ್ಷ ವೇತನ ಪಡೆಯಲಿದ್ದಾರೆ. ‘ಬಿ’ ಶ್ರೇಣಿಯಯಲ್ಲಿ ಏಕ್ತಾ ಬಿಷ್ಟ್, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ದೀಪ್ತಿ ಶರ್ಮಾ ಮತ್ತು ಜೆಮಿಮಾ ರೋಡ್ರಿಗಸ್ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಜೂಲನ್ ಗೋಸ್ವಾಮಿ ಕಳೆದ ವರ್ಷ ‘ಎ’ ಗ್ರೇಡ್ ನಲ್ಲಿದ್ದರೆ, ಜೆಮಿಮಾ ರೋಡ್ರಿಗಸ್ ‘ಸಿ’ ಗ್ರೇಡ್ ನಲ್ಲಿದ್ದರು. ಈ ಆಟಗಾರ್ತಿಯರು ವಾರ್ಷಿಕ 30 ಲಕ್ಷ ಸಂಭಾವನೆ ಪಡೆಯಲಿದ್ದಾರೆ.
ಮಹಿಳಾ ಗುತ್ತಿಗೆಯ ‘ಸಿ’ ಪಟ್ಟಿಯಲ್ಲಿ ರಾಧಾ ಯಾದವ್, ಹೇಮಲತಾ, ಅನುಜಾ ಪಟೇಲ್, ವೇದಾ ಕೃಷ್ಣಮೂರ್ತಿ, ಮಾನಸಿ ಜೋಶಿ, ಪೂನಂ ರಾವತ್, ಮೋನಾ ಮೆಶ್ರಾಮ್, ಅರುಂಧತಿ ರೆಡ್ಡಿ, ರಾಜೇಶ್ವರಿ ಗಾಯಕ್ವಾಡ್, ತಾನಿಯಾ ಭಾಟಿಯಾ ಮತ್ತು ಪೂಜಾ ವಸ್ಟ್ರಾಕರ್ ಸ್ಥಾನ ಪಡೆದಿದ್ದು ವಾರ್ಷಿಕ 10 ಲಕ್ಷ ವೇತನ ಪಡೆಯಲಿದ್ದಾರೆ.