Advertisement

BC Road: ಬಿರುಗಾಳಿ ಸಹಿತ ಮಳೆ; ಅಪಾರ ಹಾನಿ

12:14 AM Jul 25, 2024 | Team Udayavani |

ಬಂಟ್ವಾಳ: ಬಿ.ಸಿ.ರೋಡ್‌ ಭಾಗದಲ್ಲಿ ಜು. 23ರ ರಾತ್ರಿ ಮಳೆಯೊಂದಿಗೆ ಏಕಾಏಕಿ ಬೀಸಿದ ಬಿರುಗಾಳಿಯ ಪರಿಣಾಮ ಹಲವು ಮರ
ಗಳು, ವಿದ್ಯುತ್‌ ಕಂಬಗಳು ಬಿದ್ದು, ಹಾನಿಯಾಗಿರುವ ಜತೆಗೆ ನಗರ ಪೊಲೀಸ್‌ ಠಾಣೆಯ ಬಳಿ ಮರವೊಂದು ಬಿದ್ದು ಕಾರು ಜಖಂಗೊಂಡ ಘಟನೆ ನಡೆದಿದೆ.

Advertisement

ಬಿ.ಸಿ.ರೋಡು ಸರ್ಕಲ್‌ ಸಹಿತ ಸುತ್ತಮುತ್ತಲ ಪ್ರದೇಶದಲ್ಲಿ 10ಕ್ಕೂ ಅಧಿಕ ವಿದ್ಯುತ್‌ ಕಂಬಗಳು ಬಿದ್ದಿದ್ದು, ಕಬ್ಬಿಣ ಕಂಬಗಳು ಕೂಡ ಸಂಪೂರ್ಣ ಬಾಗಿರುವುದು ಗಾಳಿಯ ತೀವ್ರತೆಗೆ ಸಾಕ್ಷಿಯಾಗಿದೆ. ಜತೆಗೆ ಸರ್ಕಲ್‌ ಬಳಿ ಅಳವಡಿಸಿದ್ದ ಬ್ಯಾನರ್‌ಗಳು ಹರಿದು ಚಿಂದಿಯಾಗಿದ್ದು, ಹೋಲ್ಡಿಂಗ್ಸ್‌ಗಳ ಕಂಬಗಳಿಗೂ ಹಾನಿಯಾಗಿದೆ.

ಸ್ಪರ್ಶ ಕಲಾಮಂದಿರದ ಬಳಿ ಬೃಹತ್‌ ಗಾತ್ರದ ಮರ ಬಿದ್ದು, ಮಂದಿರ ಸಂಪರ್ಕದ ರಸ್ತೆ, ಆವರಣ ಗೋಡೆಗೆ ಹಾನಿಯಾಗಿದೆ. ಇನ್ನೂ ಹಲವು ಕಡೆಗಳಲ್ಲಿ ಮರ ಬಿದ್ದು ಸಣ್ಣಪುಟ್ಟ ಹಾನಿ ಸಂಭವಿಸಿದೆ. ಹೆದ್ದಾರಿ ಸಹಿತ ಸಂಪರ್ಕ ರಸ್ತೆಗಳಿಗೆ ತೊಂದರೆಯಾಗುವ ಮರ, ವಿದ್ಯುತ್‌ ಕಂಬಗಳನ್ನು ಮೆಸ್ಕಾಂ, ಅಗ್ನಿಶಾಮಕ, ಪೊಲೀಸ್‌, ಕಂದಾಯ ಇಲಾಖೆ ಸಿಬಂದಿ ತೆರವು ಕಾರ್ಯ ನಡೆಸಿದ್ದು, ಉಳಿದಂತೆ ಬುಧವಾರ ದಿನವಿಡೀ ವಿದ್ಯುತ್‌ ಕಂಬ ಅಳವಡಿಸಿ ದುರಸ್ತಿ ಕಾರ್ಯ ನಡೆಯಿತು. ಹೀಗಾಗಿ ದಿನವಿಡೀ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ವಿಟ್ಲ ಮುಡ್ನೂರು ಗ್ರಾಮದ ಕಂಬಳಿ ಮೂಲೆಯಲ್ಲಿ ಮೀನಾಕ್ಷಿ ನಾಯ್ಕ ಅವರ ಮನೆಯ ಒಂದು ಭಾಗಕ್ಕೆ ಮರ ಬಿದ್ದು ಹಾನಿಯಾಗಿದೆ. ಪುಣಚ ಗ್ರಾಮದ ಮೂಡಂಬೈಲಿನಲ್ಲಿ ಸರೋಜಿನಿ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಅಮ್ಮುಂಜೆ ಗ್ರಾಮದ ಪ್ರೇಮಲತಾ ಅವರ ಮನೆಗೆ ಹೊಂದಿಕೊಂಡಿರುವ ಕೊಠಡಿಯ ಗೋಡೆ ಕುಸಿದು ಬಿದ್ದಿದೆ.

ಬಿ.ಸಿ.ರೋಡ್‌: ತೆಂಗಿನ ಮರ ಬಿದ್ದು
ಬಂಟ್ವಾಳ ಡಿವೈಎಸ್‌ಪಿ ಕಚೇರಿಗೆ ಹಾನಿ
ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಜು. 23ರ ರಾತ್ರಿ ಬೀಸಿದ ಬಿರುಗಾಳಿಯ ಪರಿಣಾಮ ತೆಂಗಿನಮರ ಬಿದ್ದು,ಬಂಟ್ವಾಳ ಡಿವೈಎಸ್‌ಪಿ ಕಚೇರಿ ಸಂಪೂರ್ಣ ಜಖಂಗೊಂಡಿದೆ.

Advertisement

ಕಚೇರಿಯ ಮೇಲ್ಛಾವಣಿಯ ಹಂಚುಗಳು ಪುಡಿಯಾಗಿದೆ. ಡಿವೈಎಸ್‌ಪಿಯವರ ಚೇಂಬರ್‌ ಭಾಗದಲ್ಲೇ ತೆಂಗಿನ ಮರ ಬಿದ್ದಿದೆ. ಆದರೆ ಡಿವೈಎಸ್‌ಪಿ ಎಸ್‌. ವಿಜಯಪ್ರಸಾದ್‌ ಅವರು ಘಟನೆಗಿಂತ ಕೆಲವೇ ಕ್ಷಣಗಳ ಮೊದಲು ಕಚೇರಿಯಿಂದ ಹೊರ ಹೋಗಿದ್ದರು. ಇತರ ಸಿಬಂದಿ ಕಚೇರಿಯಲ್ಲೇ ಇದ್ದು, ಎಲ್ಲರೂ ಪಾರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next