ಬಂಟ್ವಾಳ: ಬಿ.ಸಿ.ರೋಡ್- ಜಕ್ರಿಬೆಟ್ಟು ಚತುಷ್ಪಥ ಕಾಂಕ್ರೀಟ್ ಹೆದ್ದಾರಿಯು ಉದ್ಘಾಟನೆಗೊಂಡು 5 ತಿಂಗಳು ಕಳೆದ ಬಳಿಕ ಹೆದ್ದಾರಿ ಮಧ್ಯೆ ಅಳವಡಿಸಿದ ಎಲ್‌ಇಡಿ ಬೀದಿ ದೀಪಗಳು ಉರಿಯಲಾರಂಭಿಸಿವೆ. ಬೀದಿದೀಪಗಳ ನಿರ್ವಹಣೆಯ ಜವಾಬ್ದಾರಿಯನ್ನು ಬಂಟ್ವಾಳ ಪುರಸಭೆ ತೆಗೆದುಕೊಂಡ ಬಳಿಕ ವಿದ್ಯುತ್ ಸಂಪರ್ಕ ನೀಡಲಾಗಿದೆ.
ಸುಮಾರು 5 ತಿಂಗಳ ಹಿಂದೆ ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ಹೆದ್ದಾರಿ ಇಲಾಖೆ ಸಚಿವ ನಿತಿನ್ ಘಡ್ಕರಿ ಹೆದ್ದಾರಿಯನ್ನು ಉದ್ಘಾಟಿಸಿದ್ದರು. ಆದರೆ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಂಡರೂ ಬೀದಿ ದೀಪ ಗಳು ಉರಿಯುತ್ತಿರಲಿಲ್ಲ.
ಈ ಕುರಿತು “ಉದಯವಾಣಿ ಸುದಿನ’ದಲ್ಲಿ ಜು. 30ರಂದು “ಬಿ.ಸಿ.ರೋಡ್-ಜಕ್ರಿಬೆಟ್ಟು ಚತು ಷ್ಪಥ ಹೆದ್ದಾರಿ-ಉದ್ಘಾಟನೆಯಾಗಿ 5 ತಿಂಗಳು ಕಳೆದರೂ ಉರಿಯದ ಬೀದಿ ದೀಪ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಅದಕ್ಕೆ ಸ್ಪಂದನೆ ಎಂಬಂತೆ ಬೀದಿದೀಪಗಳು ಉರಿಯಲಾರಂಭಿಸಿವೆ. ಹೆದ್ದಾರಿ ಕಾಮಗಾರಿ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಡಿವೈಡರ್‌ಗೆ ಉತ್ತಮ ಗುಣಮಟ್ಟದ ಬೀದಿ ದೀಪಗಳನ್ನು ಅಳವಡಿಸಿತ್ತು. ಅದನ್ನು ಎರಡೂ ರಸ್ತೆ ಗಳಿಗೂ ಹೊಂದಿಕೆಯಾಗುವಂತೆ ಸಿದ್ಧಗೊಳಿಸಲಾಗಿತ್ತು. ಆದರೆ ಅವುಗಳು ಉರಿಯದಿರುವ ಕುರಿತು ಸಾರ್ವಜನಿಕರು ಆಕ್ರೋಶಗಳು ವ್ಯಕ್ತಪಡಿಸಿದ್ದರು.
ಇಲಾಖೆಯು ಬೀದಿ ದೀಪಗಳನ್ನು ಅಳವಡಿಸಿದ್ದರೂ ನಿರ್ವಹಣೆಗೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭೆಗೆ ಪತ್ರ ಬರೆಯಲಾಗಿತ್ತು. ಪುರಸಭೆಯು ಕಳೆದ ಸಾಮಾನ್ಯ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿ ಕೌನ್ಸಿಲ್‌ನ ಅನುಮತಿಯನ್ನೂ ಪಡೆಯಲಾಗಿತ್ತು.
ಎಲ್ಲ ಕಡೆ ಅಳವಡಿಸಿಲ್ಲ
ಸುಮಾರು 3.85 ಕಿ.ಮೀ. ಉದ್ದದ ಹೆದ್ದಾರಿ ಮಧ್ಯೆ ಸುಮಾರು 80ರಷ್ಟು ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಬಂಟ್ವಾಳ ಬೈಪಾಸ್ ಜಂಕ್ಷನ್, ಭಂಡಾರಿಬೆಟ್ಟು ಹಾಗೂ ಕಾಮಾಜೆ ಕ್ರಾಸ್ ಬಳಿ ಬೀದಿದೀಪಗಳನ್ನು ಇನ್ನೂ ಅಳವಡಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ. ಈ ಭಾಗಕ್ಕೂ ಶೀಘ್ರ ದೀಪಗಳನ್ನು ಅಳವಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.