ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ಸರಾಗ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಈ ಹಿನ್ನೆಲೆಯಲ್ಲಿ ಈ ಪರಿಸರದಲ್ಲಿ ಪದೇ ಪದೇ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ರವಿವಾರವೂ ಹೆದ್ದಾರಿಯ ಕಲ್ಲಡ್ಕ, ಮೆಲ್ಕಾರ್, ಸೂರಿಕುಮೇರ್ ಭಾಗದಲ್ಲಿ ವಾಹನಗಳ ಸರತಿ ಕಂಡುಬಂತು.
ರವಿವಾರ ರಜಾ ದಿನವಾದರೂ ಸಾಕಷ್ಟು ಸಮಾರಂಭಗಳಿದ್ದರಿಂದ ಹೆಚ್ಚಿನ ವಾಹನಗಳ ಓಡಾಟವಿತ್ತು. ಇದರಿಂದ ಒತ್ತಡ ಹೆಚ್ಚಿದ್ದು, ಈ ನಡುವೆ ಕಲ್ಲಡ್ಕ ಸಮೀಪ ಲಾರಿಯೊಂದು ಹೆದ್ದಾರಿಯಲ್ಲೇ ಕೆಟ್ಟು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.
ಹೆದ್ದಾರಿಯ ಎರಡೂ ಬದಿಗಳಲ್ಲೂ ವಾಹನಗಳು ನಿಂತ ಪರಿಣಾಮ ಕಲ್ಲಡ್ಕದಲ್ಲಿ ಆ್ಯಂಬುಲೆನ್ಸ್ ಕೂಡ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಹಾಕಿಕೊಂಡಿತ್ತು. ಮೆಲ್ಕಾರಿನಲ್ಲಿ ಮುಡಿಪು ಭಾಗದ ರಸ್ತೆಯೂ ಹೆದ್ದಾರಿಯನ್ನು ಸೇರುವುದರಿಂದ ವಾಹನಗಳ ಅಡ್ಡಾದಿಡ್ಡಿ ಚಲನೆಯಿಂದ ಗೊಂದಲ ಉಂಟಾಗಿತ್ತು. ಇಲ್ಲಿ ಹೆದ್ದಾರಿಯ ಜತೆಗೆ ಮುಡಿಪು ರಸ್ತೆಯಲ್ಲೂ ವಾಹನಗಳು ಸಾಲಾಗಿ ನಿಂತಿದ್ದವು.
ಹೆದ್ದಾರಿಯ ಪ್ರಮುಖ ಜಂಕ್ಷನ್‌ಗಳಲ್ಲಿ ಕ್ರಾಸ್ ರಸ್ತೆಗಳು ಇರುವುದರಿಂದ ಪ್ರತಿ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್ ಕಾಮಗಾರಿ ನಡೆಯುತ್ತಿದ್ದು, ಅದರ ಮೇಲ್ಭಾಗಕ್ಕೆ ಸ್ಲಾ Âಬ್ ಅಳವಡಿಸುವ ಕಾಮಗಾರಿಗೆ 2-3 ಕ್ರೇನ್‌ಗಳು ಹೆದ್ದಾರಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಹೀಗಾಗಿ ಹೆಚ್ಚಿನ ದಿನಗಳಲ್ಲಿ ಟ್ರಾಫಿಕ್ ಜಾಮ್ ಮರುಕಳಿಸುತ್ತಲೇ ಇದೆ.
ಮಾಣಿ ಜಂಕ್ಷನ್‌ನಲ್ಲಿ ಹೆದ್ದಾರಿಗೆ ಮೈಸೂರು ಹೆದ್ದಾರಿಯೂ ಸೇರುವುದರಿಂದ ಪ್ರಸ್ತುತ ಕಿರಿದಾದ ರಸ್ತೆಯಲ್ಲಿ ಸಂಚರಿಸುವುದಕ್ಕೆ ಅವಕಾಶ ನೀಡಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಮಳೆಯಿಂದಲೂ ಹೆದ್ದಾರಿಯಲ್ಲಿ ಹೊಂಡಗಳು ಕಾಣಿಸಿಕೊಳ್ಳುವುದ್ದು, ಇದರಿಂದ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿ ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದೆ.