Advertisement

ಬಿ.ಸಿ.ರಮೇಶ್‌ ಬೆಂಗಾಲ್‌ಗೆ ಹೊಸ ಕೋಚ್‌

12:30 AM Mar 21, 2019 | |

ಬೆಂಗಳೂರು: ಮಾಜಿ ಕಬಡ್ಡಿ ಆಟಗಾರ ಬಿ.ಸಿ.ರಮೇಶ್‌ 7ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬೆಂಗಾಲ್‌ ವಾರಿಯರ್ ತಂಡದ ಪರ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ.

Advertisement

ಸ್ವತಃ ಈ ವಿಷಯವನ್ನು ಉದಯವಾಣಿಗೆ ಬಿ.ಸಿ.ರಮೇಶ್‌ ತಿಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ ತಂಡಕ್ಕೆ ಬಿ.ಸಿ.ರಮೇಶ್‌ ಕೋಚ್‌ ಆಗಿದ್ದರು. ಇವರ ಸಾರಥ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ ಮೊದಲ ಸಲ ಪ್ರೊ ಕಬಡ್ಡಿ ಟ್ರೋಫಿ ಜಯಿಸಿ ಇತಿಹಾಸ ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೊಸ ಅವಕಾಶದ ಬಗ್ಗೆ ಮಾತನಾಡಿದ ಬಿ.ಸಿ.ರಮೇಶ್‌ ತನ್ನ ಖುಷಿ ಹಂಚಿಕೊಂಡಿದ್ದು ಹೀಗೆ, “ಕಳೆದ ಹಲವು ವರ್ಷಗಳ ಅನುಭವ ನನಗೆ ಇಂದು ಇಂತಹ ದೊಡ್ಡ ಅವಕಾಶ ಕಲ್ಪಿಸಿಕೊಟ್ಟಿದೆ. ಇದರಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗುತ್ತೇನೆ ಎನ್ನುವ ನಂಬಿಕೆಯೂ ನನಗಿದೆ. ಈ ಹಿಂದೆಯೂ ಬೆಂಗಾಲ್‌ ತಂಡದ ಪರ ಕೋಚ್‌ ಆಗಿ ಕೆಲಸ ಮಾಡಿದ್ದೇನೆ. ಆ ತಂಡ ನನಗೆ ತವರು ಮನೆ ಇದ್ದಂತೆ ಎಂದು ತಿಳಿಸಿದರು. ಇದೇ ವೇಳೆ ಬೆಂಗಳೂರು ಬುಲ್ಸ್‌ ಫ್ರಾಂಚೈಸಿ ನಿಮ್ಮನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಲಿಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ಬೆಂಗಳೂರು ಫ್ರಾಂಚೈಸಿಯಿಂದ ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಅದಕ್ಕಿಂತ ಹೆಚ್ಚಾಗಿ ಬೆಂಗಾಲ್‌ ವಾರಿಯರ್ ತಂಡ ಒಳ್ಳೆಯ ಅವಕಾಶ ನೀಡಿದೆ. ಇದನ್ನು ತಿರಸ್ಕರಿಸಲು ಮನಸ್ಸಾಗಲಿಲ್ಲ ಎಂದರು.

ಪ್ರೊ ಕಬಡ್ಡಿ 2ನೇ ಆವೃತ್ತಿಯಲ್ಲಿ ಬಿ.ಸಿ.ರಮೇಶ್‌ ಬೆಂಗಾಲ್‌ ವಾರಿಯರ್ ತಂಡಕ್ಕೆ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ 3 ಹಾಗೂ ನಾಲ್ಕನೇ ಆವೃತ್ತಿಯಲ್ಲಿ ಬಿ.ಸಿ.ರಮೇಶ್‌ ಪಾಲ್ಗೊಂಡಿರಲಿಲ್ಲ. 5ನೇ ಆವೃತ್ತಿಯಲ್ಲಿ ಪುಣೆ ತಂಡದ ಕೋಚ್‌ ಆಗುವ ಮೂಲಕ ಮತ್ತೆ ಪ್ರೊ ಕಬಡ್ಡಿ ಕುಟುಂಬ ಸೇರಿಕೊಂಡರು. ಆ ಕೂಟದಲ್ಲಿ ಪುಣೆ ತಂಡವನ್ನು ಪ್ರೀ ಕ್ವಾರ್ಟರ್‌ಫೈನಲ್‌ ಹಂತದ ತನಕ ಯಶಸ್ವಿಯಾಗಿ ನಡೆಸಿದ್ದ ಹೆಗ್ಗಳಿಕೆ ರಮೇಶರದ್ದು. ಆರನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ ತಂಡವನ್ನು ಕೂಡಿಕೊಂಡಿದ್ದ ಬಿ.ಸಿ.ರಮೇಶ್‌ ಭಾರೀ ಸಂಚಲನ ಸೃಷ್ಟಿಸಿದ್ದರು. ತಂಡದ ನಾಯಕ ರೋಹಿತ್‌ ಕುಮಾರ್‌, ಪವನ್‌ ಸೆಹ್ರಾವತ್‌ ಹಾಗೂ ಕಾಶಿಲಿಂಗ್‌ ಅಡಕೆಯಂತಹ ತಾರಾ ಆಟಗಾರರಿಗೆ ಯಶಸ್ವಿ ಟಿಪ್ಸ್‌ ನೀಡಿದ್ದರು. ಇದರ ಪರಿಣಾಮವಾಗಿಯೇ ಬೆಂಗಳೂರು ಬುಲ್ಸ್‌ ತಂಡ ಫೈನಲ್‌ನಲ್ಲಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡವನ್ನು ಸೋಲಿಸಿ ಮೊದಲ ಬಾರಿಗೆ ಟ್ರೋಫಿ ಎತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next