ಕೊಪ್ಪಳ: ಆಹಾರ ಸಚಿವ ಉಮೇಶ ಕತ್ತಿ ಅವರು ರೈತರಿಗೆ ಅಕ್ಕಿ ವಿತರಣೆ ಮಾಡುವ ವಿಚಾರದಲ್ಲಿ ಸಾಯಲಿ ಎನ್ನುವ ಹೇಳಿಕೆ ನೀಡಿರುವುದು ದುರ್ದೈವದ ಸಂಗತಿ. ಅವರು ಹಾಗೆ ಹೇಳಬಾರದಿತ್ತು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಬೇಸರ ವ್ಯಕ್ತಪಡಿಸಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಪತ್ರಕರ್ತರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ರಾಜ್ಯ ಸರ್ಕಾರವು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಕೊಡಬೇಕೆಂದು ನಿರ್ಧರಿಸಿ ಅದಕ್ಕೆ 2600 ಕೋಟಿ ರೂ. ಮೀಸಲಿಟ್ಟಿದೆ. ಏನೇ ಕೊರತೆ ಬಂದರೂ ಅದನ್ನು ನೀಗಿಸುವ ಸಾಮರ್ಥ್ಯ ಸರ್ಕಾರಕ್ಕಿದೆ. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರವೇನೂ ವಿಫಲವಾಗಿಲ್ಲ. ನಾವು ಸೋಂಕು ಉಲ್ಭಣವನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಅದು ನಾಲ್ಕು ಪಟ್ಟು ಜಾಸ್ತಿಯಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಇನ್ನು ಬೆಂಗಳೂರಿನಿಂದ ಹಳ್ಳಿಗಳಿಗೆ ಜನರು ತೆರಳುತ್ತಿದ್ದಾರೆ. ಈಗ ಹಳ್ಳಿಯಲ್ಲೂ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಸರ್ಕಾರ ಯತ್ನಿಸುತ್ತಿದೆ ಎಂದರು.
ಇದನ್ನೂ ಓದಿ:ಈ ಪರಿಸ್ಥಿತಿಯಲ್ಲಿ ರಾಜಕೀಯ ಮಾಡಿದರೆ ಮಾನವೀಯ ಮೌಲ್ಯ ಕಳೆದುಕೊಳ್ಳಬೇಕಾಗುತ್ತದೆ: ಶ್ರೀರಾಮುಲು
ನನ್ನ ಹಿರೇಕೆರೂರು ಕ್ಷೇತ್ರದಲ್ಲಿ ಕೋವಿಡ್‌ನಿಂದ ಬಳಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ವೆಚ್ಚ ಭರಿಸಲಾಗದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದೇನೆ. ನನ್ನಂತೆಯೇ ಇತರೆ ಜನಪ್ರತಿನಿಧಿಗಳು ತಮ್ಮ ಕೈಲಾದಷ್ಟು ಬಡವರಿಗೆ ಕೋವಿಡ್ ಸಂದರ್ಭದಲ್ಲಿ ತಮ್ಮದೇ ರೀತಿಯಲ್ಲಿ ಸಹಾಯಸ್ತ ಚಾಚಬೇಕು ಎಂದರಲ್ಲದೇ, ಕೊಪ್ಪಳ ಜಿಲ್ಲೆಯಲ್ಲಿ ಸೋಂಕಿತರಿಗೆ ಬೆಡ್, ಆಕ್ಸಿಜನ್ ಕೊರತೆ ಕಂಡು ಬಂದಿಲ್ಲ ಎಂದರು.