ಕೊಪ್ಪಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಾರ್ಥ ರಾಜಕಾರಣ ಹಾಗೂ ಕಾಂಗ್ರೆಸ್ ಮೋಸ ಮಾಡಿದ್ದರಿಂದ ನಾವು 17 ಜನ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದೆವು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಹೇಳಿದರು.
ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪೂರ ಬಳಿ ಸುದ್ದಿಗಾರರ ಜೊತೆ ಮಾತನಾಡಿ, ಸಿದ್ದರಾಮಯ್ಯ ಅವರು ಸರಿಯಾಗಿ ನಿರ್ವಹಣೆ ಮಾಡದಿದ್ದರಿಂದಲೇ ಅಂತಹ ಪಕ್ಷ ತೊರೆಯುವ ಸನ್ನಿವೇಶ ಸೃಷ್ಟಿಯಾಯಿತು ಎಂದರು.
ನಮ್ಮನ್ನ ಬಿಜೆಪಿ ಬೀದಿಗೆ ನಿಲ್ಲಿಸುತ್ತೆ ಎಂದು ಕೆಲ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ನಾನು ಮಂತ್ರಿಯಾಗಿ ಬೀದಿಯಲ್ಲಿ ನಿಂತು ಮಾಧ್ಯಮದ ಮುಂದೆ ಮಾತನಾಡುತ್ತಿದ್ದೇನೆ. ಸಿಎಂ ಬಿಎಸ್ವೈ ಅವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಇಬ್ಬರು ಸಿಎಂ ಇದ್ದಾರೆ ಎಂದು ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೂ ರಾಕೇಶ್ ಸೂಪರ್ ಸಿಎಂ ಅಂತಿದ್ದರು. ಕೆಂಪಯ್ಯ ಗೃಹಸಚಿವ ಎಂಬ ಮಾತುಗಳಿದ್ದವು. ಸಿದ್ದು ರಾಜಕೀಯ ಉದ್ದೇಶದಿಂದ ಇಬ್ಬರು ಸಿಎಂ ಎಂದಿದ್ದಾರೆ. ಅವರ ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ. ಇದೊಂದು ನಿರಾಧಾರ ಆರೋಪ. ರಾಜಕೀಯ ಕಾರಣಕ್ಕಾಗಿ ಸಿದ್ದು ಆರೋಪಿಸುತ್ತಿದ್ದಾರೆ ಎಂದರು.
ಚುನಾವಣೆ ಸಮಯದಲ್ಲಿ ನಮ್ಮ ಗೆಲುವಿಗಾಗಿ ಕುಟುಂಬ ಸದಸ್ಯರೆಲ್ಲರೂ ದುಡಿದಿರುತ್ತಾರೆ. ಹೀಗಾಗಿ ಕೆಲವೊಂದು ಸಲಹೆ, ಸೂಚನೆ ಕೊಡುತ್ತಾರೆ. ಹಾಗೆಂದ ಮಾತ್ರಕ್ಕೆ ಅವರೇ ನಮ್ಮ ಪರವಾಗಿ ಆಡಳಿತ ನಡೆಸುತ್ತಿದ್ದಾರೆಂದು ಹೇಳುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಬೇಕಾದರೂ ಸಲಹೆ ನೀಡಬಹುದು. ಅದನ್ನು ಸ್ವೀಕಾರ ಮಾಡಬಹುದು ಅಥವಾ ಬಿಡಬಹುದು ಎಂದರು.
ಆರ್.ಶಂಕರ್, ಎಂಟಿಬಿ ನಾಗರಾಜ, ವಿಶ್ವನಾಥ ತ್ಯಾಗ ಮಾಡಿದ್ದರಿಂದಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ಎಂಟಿಬಿಯವರಿಗೆ ಬಚ್ಚೆಗೌಡ ಕುಟುಂಬದಿಂದ ಅನ್ಯಾಯ ಆಗಿರುವುದು ನಿಜ. ಚುನಾವಣೆಯಲ್ಲಿ ಶರತ್ ಬಚ್ಚೆಗೌಡ ಸ್ಪರ್ಧೆ ಮಾಡದಂತೆ ಪಕ್ಷ ಸೂಚಿಸಿದರೂ ಸ್ಪರ್ಧೆ ಮಾಡಿದ್ದರಿಂದ ನಾಗರಾಜ ಸೋಲಬೇಕಾಯಿತು. ಯಡಿಯೂರಪ್ಪ ಅವರು ಅದನ್ನು ಸರಿಪಡಿಸುವರೆಂದು ವಿಶ್ವಾಸ ವ್ಯಕ್ತಪಡಿಸಿದರು