ಬೆಂಗಳೂರು: ನಗರದಲ್ಲಿ ಪಾಲಿಕೆ ಯಾವ ಕಾಮಗಾರಿ ನಡೆಸುತ್ತಿದೆ. ಅದಕ್ಕೆ ಎಷ್ಟು ಹಣ ವ್ಯಯಿಸುತ್ತಿದೆ ಎನ್ನುವ ಪಿನ್ ಟು ಪಿನ್ ಮಾಹಿತಿ ಇನ್ಮುಂದೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಪಾಲಿಕೆ ಅಧಿಕೃತ ವೆಬ್‌ಸೈಟ್ //bbmp.gov.in/) ಅಭಿವೃದ್ಧಿಪಡಿಸಲು ಪಾಲಿಕೆ ಮುಂದಾಗಿದ್ದು, ಕೊನೆಗೂ ನಗರದ ಕಾಮಗಾರಿಗಳ ಪಾರದರ್ಶಕತೆ ಚಿತ್ರಣ ಸಿಗಲಿದೆ.
ಪಾಲಿಕೆಯ ಪ್ರಮುಖ ಹಾಗೂ ಅಧಿಕೃತ ವೆಬ್ ಸೈಟ್‌ನಲ್ಲಿ ಲೋಪ ಸರಿಪಡಿಸುವುದರ ಜತೆಗೆ ನಗರದಲ್ಲಿನ ಕಾಮಗಾರಿಗಳು, ಯೋಜನೆಗಳ ಬಗ್ಗೆ ಸಾರ್ವಜನಿಕರೂ ಸಂಪೂರ್ಣ ಮಾಹಿತಿ ನೀಡುವ ಉದ್ದೇಶದಿಂದ ಪಾಲಿಕೆ ಅಧಿಕೃತ ವೆಬ್‌ಸೈಟ್‌ನಲ್ಲಿ ಸಿಟಿಜನ್ ವೀವ್ ಹಾಗೂ ಸಿಟಿಜನ್ ಸರ್ವೀಸ್ ಎಂಬ (ಲಿಂಕ್)ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ. ಶೀಘ್ರದಲ್ಲೇ ಇದು ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ ಎಂದು ಪಾಲಿಕೆ ಮಾಹಿತಿ ತಂತ್ರಜ್ಞಾನ ವಿಭಾಗದ ಅಧಿಕಾರಿಗಳು “ಉದಯವಾಣಿ’ಗೆ ಖಚಿತಪಡಿಸಿದ್ದಾರೆ.
ಯಾವೆಲ್ಲ ಬದಲಾವಣೆ ಆಗಲಿದೆ?: ಪಾಲಿಕೆ ವೆಬ್‌ಸೈಟ್‌ನಲ್ಲಿ ಪಾಲಿಕೆಯ ಹೊಸ ಸುತ್ತೋಲೆ, ಆದೇಶ, ನಿರ್ಧಾರ, ಘನತ್ಯಾಜ್ಯ ನಿರ್ವಹಣೆ, ಕಲ್ಯಾಣ ವಿಭಾಗ, ಆಡಳಿತ, ಮಾರುಕಟ್ಟೆ, ಮಾಹಿತಿ ತಂತ್ರಜ್ಞಾನ, ಕೆರೆ, ಆರೋಗ್ಯ, ಪಾಲಿಕೆಯ ಇತಿಹಾಸ ಹಾಗೂ ಶಿಕ್ಷಣ ಸೇರಿ ಎಲ್ಲಾ ವಿಭಾಗಗಳಿಗ ಪ್ರಸ್ತುತ ಸ್ಥಿತಿ ಹಾಗೂ ವ್ಯವಸ್ಥೆ ಬಗ್ಗೆ ಅಪ್‌ಡೇಟ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತ ಹಾಗೂ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರ ಫೇಸ್‌ಬುಕ್ ಖಾತೆಗಳ ವಿವರವನ್ನೂ ಸೇರಿಸಲಾಗಿದೆ.
ಆಸ್ತಿ ತೆರಿಗೆ ವಿಭಾಗವೂ ಪರಿಷ್ಕೃತ: ಪಾಲಿಕೆ ಆಸ್ತಿ ತೆರಿಗೆ ವಿಭಾಗದ ಕಾಲಂ ವೆಬ್‌ಸೈಟ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ನೆಟ್‌ಬ್ಯಾಂಕಿಂಗ್, ಆನ್ ಲೈನ್ ಸೇವೆ, ಟ್ಯಾಕ್ಸ್ ಲೆಕ್ಕಾಚಾರ, ಆಸ್ತಿ ತೆರಿಗೆ ಪಾವತಿ ಮಾಡಿರುವ ಸ್ಟೇಟಸ್‌ಗಳನ್ನು ಮತ್ತಷ್ಟು ಸರಳೀಕರಣ ಹಾಗೂ ಸುಲಭವಾಗಿ ಸಾರ್ವಜನಿಕರಿಗೆ ಲಭ್ಯವಾಗುವ ರೀತಿ ಅಭಿವೃದ್ಧಿಪಡಿಸಲಾಗಿದೆ.
ಸಿಟಿಜನ್ ವೀವ್: ಬಿಬಿಎಂಪಿ ಪ್ರತಿ ವರ್ಷವೂ ಕೋಟ್ಯಂತರ ರೂ. ಮೌಲ್ಯದ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತದೆ. ಆದರೆ, ಈ ಕಾಮಗಾರಿಗಳ ಬಗ್ಗೆಯೂ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ಸಿಗುತ್ತಿರಲಿಲ್ಲ. ಕಾಮಗಾರಿಗಳ ಪ್ರಗತಿ ಹಾಗೂ ಅನುದಾನ ಬಳಕೆ ಮಾಡುವುದರ ಬಗ್ಗೆ ಪಾರದರ್ಶಕತೆ ಪ್ರದರ್ಶನ ಕೊರತೆ ಇತ್ತು. ಹೀಗಾಗಿ, ನಗರದಲ್ಲಿನಕಾಮಗಾರಿ ಹಾಗೂ ಅನುದಾನ ಬಳಕೆ ಬಗ್ಗೆ ಸಾರ್ವಜನಿಕರಿಗೆ ಅನುಮಾನ ಇದ್ದೇ ಇತ್ತು. ಇದನ್ನು ತಪ್ಪಿಸಿ, ಕಾಮಗಾರಿಗಳಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಅಧಿಕೃತ ವೆಬ್‌ಸೈಟ್ ಗೆ ಸಿಟಿಜನ್ ವೀವ್ ಎಂಬ ಕಾಲಂ ಸೇರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಸಿಟಿಜನ್ ವೀವ್‌ನಲ್ಲಿ ಕಾಮಗಾರಿಗಳ ಸಂಪೂರ್ಣ ವಿವರ :
- ನಗರದ ಪಾಲಿಕೆ ಕೈಗೆತ್ತಿಕೊಂಡಿರುವ ಕಾಮಗಾರಿ ಹಾಗೂ ಯೋಜನೆಗಳ ಸಮಗ್ರ ಮಾಹಿತಿ.
- ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿ, ಹಾಲಿ ಹಾಗೂ ಉದ್ದೇಶಿತ ಕಾಮಗಾರಿ, ಇದಕ್ಕೆ ಮೀಸಲಿಟ್ಟ ಅನುದಾನ ಹಾಗೂ ಅನುದಾನ ಬಳಕೆ ವಿವರ.
- ಯಾವ ವರ್ಷದಲ್ಲಿ ಕಾಮಗಾರಿ ಅನುಷ್ಠಾನ ಮಾಡಲಾಯಿತು ಹಾಗೂ ಅನುಮೋದನೆ ಚಿತ್ರಣ.
- ಒಂದು ನಿರ್ದಿಷ್ಟ ಕಾಮಗಾರಿ ವಿಳಂಬವಾಗುತ್ತಿದ್ದರೆ ಯಾವ ಕಾರಣದಿಂದ ಕಾಮಗಾರಿ ವಿಳಂಬವಾಯಿತು ಎಂಬ ಸ್ಪಷ್ಟನೆ.
- ರಸ್ತೆ ಇತಿಹಾಸ ಈ ಹಿಂದೆ ನಡೆದಿದ್ದ ಕಾಮಗಾರಿ ಅದರ ವಿವಿರ ಹಾಗೂ ಪ್ರತಿ ರಸ್ತೆಗಳ ಮಾಹಿತಿ.
ಪಾಲಿಕೆ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಿಗೆ ಸರಳವಾಗಿ ಮಾಹಿತಿ ನೀಡುವುದು, ಕಾಮಗಾರಿ ಹಾಗೂ ಯೋಜನೆಗಳ ಬಗ್ಗೆ ಪಾರದರ್ಶಕತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಪಾಲಿಕೆಯ ಅಧಿಕೃತ ವೆಬ್‌ಸೈಟ್ ಅಭಿವೃದ್ಧಿಪ ಡಿಸಲಾಗುತ್ತಿದೆ.
–ಎನ್.ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ
-ಹಿತೇಶ್ ವೈ