Advertisement

ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬಿಬಿಎಂಪಿ ರೋಷಿನಿ ಸಹಕಾರಿ

12:16 PM Oct 21, 2018 | Team Udayavani |

ಬೆಂಗಳೂರು: ರೋಷಿನಿ ಯೋಜನೆಯಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬಡ ಮಕ್ಕಳ ಶಿಕ್ಷಣ ಸಾಮರ್ಥ್ಯ ವೃದ್ಧಿಯಾಗಲಿದೆ ಎಂದು ಮೇಯರ್‌ ಗಂಗಾಂಬಿಕೆ ಆಶಯ ವ್ಯಕ್ತಪಡಿಸಿದರು. ನಗರದ ಟೌನ್‌ಹಾಲ್‌ನಲ್ಲಿ ಶನಿವಾರ ಮೈಕ್ರೋಸಾಫ್ಟ್ ಹಾಗೂ ಟೆಕ್‌ ಅವಂತ ಗಾರ್ಡ್‌ ಸಂಸ್ಥೆಗಳು ಬಿಬಿಎಂಪಿ ಸಹಯೋಗದಲ್ಲಿ ಪಾಲಿಕೆಯ 800 ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಕಲಿಕಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

Advertisement

ಪಾಲಿಕೆಯ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದರೊಂದಿಗೆ, ಕ್ರೀಡೆ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ, ಕಂಪ್ಯೂಟರ್‌ ಸೇರಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ರೋಷಿನಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು. 

ಬಿಬಿಎಂಪಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಖಾಸಗಿ ಶಾಲೆಗಳ ಮಕ್ಕಳಿಗೆ ಯಾವುದರಲ್ಲಿಯೂ ಕಡಿಮೆಯಿಲ್ಲ. ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳು ಅತ್ಯಂತ ಬುದ್ಧಿವಂತರಾಗಿದ್ದು, ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ. ಅವರಿಗೆ ತಂತ್ರಜ್ಞಾನ ಮತ್ತು ಆಂಗ್ಲ ಭಾಷೆಯ ಅರಿವು ನೀಡಬೇಕಿದೆ. ಅದರಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿರುವುದರಿಂದ ಶಿಕ್ಷಕರಿಗೆ ರೋಷಿನಿ ಯೋಜನೆಯಡಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಬಿಬಿಎಂಪಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂಜರಿಯುವ ಪರಿಸ್ಥಿತಿಯಿದೆ. ಶಿಕ್ಷಕರು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಉತ್ತಮ ಫ‌ಲಿತಾಂಶ ಬರಲು ಸಾಧ್ಯವಾಗುತ್ತದೆ. ಹೀಗಾಗಿ ಶಿಕ್ಷಕರು ಕಾರ್ಯಾಗಾರದ ಸದುಪಯೋಗ ಪಡೆದು ಮಕ್ಕಳಿಗೆ ಉತ್ತಮವಾಗಿ ಬೋಧನೆ ಮಾಡಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಮಾತನಾಡಿ, ಬಿಬಿಎಂಪಿ ಶಾಲೆಗಳೆಂದರೆ ಮೂಗು ಮುರಿಯುವ ಪರಿಸ್ಥಿತಿಯಿದೆ. ಆ ಎಲ್ಲ ಅಪನಂಬಿಕೆಗಳನ್ನು ಹೋಗಲಾಡಿಸಲು ಸರ್ಕಾರದ ಜತೆಗೆ ಬಿಬಿಎಂಪಿ ಕೈಜೋಡಿಸಿದ್ದು, ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪಾಲಿಕೆ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಅದರ ಭಾಗವಾಗಿ ಪಾಲಿಕೆಯ ಶಿಕ್ಷಕರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

Advertisement

ಪಾಲಿಕೆಯ 156 ಶಾಲೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು, ಆ ಎಲ್ಲ ಶಾಲಾ-ಕಾಲೇಜುಗಳಲ್ಲಿ ಕೆಲಸ ಮಾಡುವ 800ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡುವುದರಿಂದ 17 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈಗಾಗಲೇ ಶಾಲೆಗಳ ಅಭಿವೃದ್ಧಿ ಕಾರ್ಯ ಆರಂಭಿಸಿದ್ದು, ಡಿಸೆಂಬರ್‌ ವೇಳೆಗೆ 7 ಶಾಲೆಗಳು ಮಾದರಿ ಶಾಲೆಗಳಾಗಿ ರೂಪುಗೊಳ್ಳಲಿವೆ ಎಂದು ಹೇಳಿದರು. 

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್‌.ವೇಣುಗೋಪಾಲ್‌ ಮಾತನಾಡಿ, ಉಪನ್ಯಾಸಕರು ತಮ್ಮ ವೃತ್ತಿಯಲ್ಲಿ ಶಿಸ್ತು ಹಾಗೂ ನಿರಂತರ ಅಧ್ಯಯನ ಮನೋಭಾವ ಅಳವಡಿಸಿಕೊಳ್ಳಬೇಕು. ಪ್ರತಿ ತರಗತಿ ತೆಗೆದುಕೊಳ್ಳುವ ಮೊದಲು ಆ ವಿಷಯದ ಕುರಿತು ತಾವು ಅಭ್ಯಾಸ ಮಾಡಿ ನಂತರ ಮಕ್ಕಳಿಗೆ ಬೋಧನೆ ಮಾಡಬೇಕು. ಪೂರ್ವ ತಯಾರಿ ಮಾಡಿಕೊಂಡು ಪಾಠ ಮಾಡಿದಾಗ ವಿಷಯವನ್ನು ವಿದ್ಯಾರ್ಥಿಗಳಿಗೆ ಶೀಘ್ರ ತಲುಪಿಸಲು ಸಹಾಯಕವಾಗುತ್ತದೆ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು. 

ಪಾಲಿಕೆಯ ವ್ಯಾಪ್ತಿಯಲ್ಲಿನ ಹಲವಾರು ಶಾಲಾ-ಕಾಲೇಜುಗಳಲ್ಲಿ ಶೌಚಾಲಯಗಳೇ ಇಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದ್ದು, ಕೂಡಲೇ ಶೌಚಾಲಯ ಹಾಗೂ ಮಕ್ಕಳ ಕಲಿಕೆಗಾಗಿ ಸ್ಮಾರ್ಟ್‌ ಕ್ಲಾಸ್‌ರೂಂ ನಿರ್ಮಿಸಲು ಯೋಜನೆ ರೂಪಿಸಬೇಕಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next