ಬೆಂಗಳೂರು: ಬಿಬಿಎಂಪಿ ಶಾಲಾ, ಕಾಲೇಜುಗಳಿಲ್ಲದ ಎಲ್ಲ ವಾರ್ಡುಗಳಲ್ಲೂ ಹೊಸದಾಗಿ ಶಾಲಾ ಕಾಲೇಜುಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಜೀಮಾ ಖಾನಂ ಹೇಳಿದ್ದಾರೆ.
ಗುರುವಾರ ಚಾಮರಾಜಪೇಟೆ ಸೇರಿದಂತೆ ನಗರದ ವಿವಿಧೆಡೆ ಪಾಲಿಕೆ ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, “ಪೂರ್ವ, ಪಶ್ಚಿಮ ಮತ್ತುದಕ್ಷಿಣ ವಲಯಗಳಲ್ಲಿ ಮಾತ್ರ ಪಾಲಿಕೆಯ ಶಾಲಾ, ಕಾಲೇಜುಗಳಿವೆ. ಹೊಸ ವಲಯಗಳಾದ ಯಲಹಂಕ, ಮಹದೇವಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ ಮತ್ತು ದಾಸರಹಳ್ಳಿ ವಲಯಗಳ ವಾರ್ಡ್ ವ್ಯಾಪ್ತಿಯಲ್ಲಿ ಪಾಲಿಕೆಯ ಯಾವುದೇ ಶಾಲಾ, ಕಾಲೇಜುಗಳಿಲ್ಲ.
ಹೀಗಾಗಿ, ಅಲ್ಲೂ ಮುಂದಿನ ದಿನಗಳಲ್ಲಿ ಶಾಲಾ, ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು,” ಎಂದು ಹೇಳಿದರು. 2017-18ನೇ ಸಾಲಿನ ಬಜೆಟ್‌ನಲ್ಲಿ ಹೊಸ ಶಾಲಾ, ಕಾಲೇಜುಗಳನ್ನು ತೆರೆಯಲು ತಗಲುವ ಸೂಕ್ತ ಅನುದಾನ ಮೀಸಲಿಡುವಂತೆ ಹಣಕಾಸು ವಿಭಾಗದ ಅಕಾರಿಗಳಿಗೆ ಸೂಚಿಸುವಂತೆಯೂ ಕೋರಲಾಗಿದೆ ಎಂದು ತಿಳಿಸಿದರು.
ಬಿಬಿಎಂಪಿ ಶಾಲಾ ಕಾಲೇಜುಗಳಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಬಂದ ವಿಷಯದ ಶಿಕ್ಷಕರನ್ನು ವೃತ್ತಿಯಿಂದ ವಜಾ ಮಾಡಲು ತೀರ್ಮಾನಿಸಲಾಗಿದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ರೀತಿಯಲ್ಲಿ ಬೋಸಿ ಫಲಿತಾಂಶ ಹೆಚ್ಚಿಸಲು ಶ್ರಮಿಸಬೇಕು.
-ನಾಜಿಮಾ ಖಾನಂ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ