ದೊಡ್ಡಬಳ್ಳಾಪುರ: ತಾಲೂಕಿಗೆ ಬಿಬಿಎಂಪಿ ಕಸದ ಲಾರಿ ಬರಲು ಬಿಡುವುದಿಲ್ಲ. ಕೂಡಲೇ ಕಸ ವಿಲೇವಾರಿ ಘಟಕಗಳನ್ನು ಮುಚ್ಚಬೇಕು ಎಂದು ಆಗ್ರಹಿಸಿ ಬಿಬಿಎಂಪಿ ತ್ಯಾಜ್ಯ ಸಂಗ್ರಹಣಾ ಘಟಕ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ತಾಲೂಕಿನ ಮೂಗೇನಹಳ್ಳಿ ಗೇಟ್ ಬಳಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಮುಂದುವರಿದಿದೆ.
ಧರಣಿಯಲ್ಲಿ ಮಾತನಾಡಿದ ಎಲೆರಾಂಪುರ ಕುಂಚಿಗರ ಮಠದ ಡಾ.ಹನುಮಂತನಾಥಸ್ವಾಮೀಜಿ, ಟೆರ್ರಾಫರ್ಮಾ ಕಸ ವಿಲೇವಾರಿ ಘಟಕವನ್ನು ಮತ್ತೆ ಆರಂಭಿಸುವುದಿಲ್ಲ, ಎಂಎಸ್‌ಜಿಪಿ ಕಸ ವಿಲೇವಾರಿ ಘಟಕವನ್ನು ಒಂದು ಅಥವಾ 2 ತಿಂಗಳ ಒಳಗಾಗಿ ಸ್ಥಗಿತಗೊಳಿಸುವ ಬಗ್ಗೆ ಲಿಖೀತ ಭರವಸೆ ನೀಡದ ಹೊರತು ಸಿಎಂ ಸೇರಿದಂತೆ ಯಾರೊಂದಿಗೂ ಚರ್ಚಿಸುವ ಅಗತ್ಯವೇ ಇಲ್ಲ ಎಂದು ಹೇಳಿದರು.
ಆಯುಕ್ತರಿಂದ ಆಹ್ವಾನ: ಧರಣಿ ಸ್ಥಳಕ್ಕೆ ಭಾನುವಾರ ಸಂಜೆ ಭೇಟಿ ನೀಡಿದ್ದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಅವರು ಧರಣಿನಿರತ ಮುಖಂಡರು, ಶಾಸಕರು ಹಾಗೂ ಸ್ವಾಮೀಜಿಗಳೊಂದಿಗೆ ಸೋಮವಾರ ಬೆಳಗ್ಗೆ 9ಕ್ಕೆ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಲು ಬರುವಂತೆ ಆಹ್ವಾನ ನೀಡಿದರು.
ಧರಣಿ ಹಿಂಪಡೆಯಲ್ಲ: ಬಿಬಿಎಂಪಿ ಆಯುಕ್ತರ ಮನವಿ ತಿರಸ್ಕರಿಸಿದ ಡಾ.ಹನುಮಂತನಾಥಸ್ವಾಮೀಜಿ, ಬಿಬಿಎಂಪಿ ಕಸ ವಿಲೇವಾರಿ ಘಟಕ ಇಲ್ಲಿ ಸೃಷ್ಟಿಸಿರುವ ಅವಾಂತರದ ಸಂಪೂರ್ಣ ವರದಿ ಮುಖ್ಯಮಂತ್ರಿಗಳ ಬಳಿ ಈಗಾಗಲೇ ಇದೆ. ಮತ್ತೆ ಇದೇ ವಿಷಯದ ಬಗ್ಗೆ ಚರ್ಚಿಸುವ ಅಗತ್ಯ ಇಲ್ಲ. ನಮ್ಮ ಬೇಡಿಕೆ ಈಡೇರದ ಹೊರತು ಶಾಂತಿಯುತ ಧರಣಿಯನ್ನು ಹಿಂದಕ್ಕೆ ಪಡೆಯುವ ಅಗತ್ಯವೇ ಇಲ್ಲ. ಬಿಬಿಎಂಪಿ ಹಾಗೂ ಸಚಿವರು ಇಲ್ಲಿನ ಕಸ ವಿಲೇವಾರಿ ಘಟಕಗಳ ಸುತ್ತಲಿನ ಗ್ರಾಮಗಳಲ್ಲಿ ಬಂದು 24 ಗಂಟೆಗಳ ಕಾಲ ವಾಸ ಮಾಡಿಹೋಗಲಿ. ಇಲ್ಲಿ ಮನುಷ್ಯರು ವಾಸ ಮಾಡಲು ಯೋಗ್ಯವಾಗಿದೆ ಎಂದು ಹೇಳಿದರೆ ನಮ್ಮ ಹೋರಾಟ ಹಿಂದಕ್ಕೆ ಪಡೆಯುತ್ತೇವೆ. ಕಸ ಇಲ್ಲಿಗೆ ಬರುವುದಿಲ್ಲ ಎಂದು ಲಿಖೀತವಾಗಿ ನೀಡಿದ ಕ್ಷಣದಿಂದಲೇ ನಮ್ಮ ಹೋರಾಟವನ್ನು ನಿಲ್ಲಿಸುತ್ತೇವೆ ಎಂದು ಹೇಳಿದರು. ಬಿಬಿಎಂಪಿ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಕಸ ವಿಲೇವಾರಿ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿನೆ ನಡೆಸಿದರು.
ಲಾರಿಗಳ ಸುಳಿವಿಲ್ಲ: ಬಿಬಿಎಂಪಿ ಕಸ ವಿಲೇವಾರಿ ವಿರುದ್ಧ ಮಾ.6 ರಿಂದ ಪ್ರತಿಭಟನಾ ಧರಣಿ ಆರಂಭವಾದ ನಂತರ ಕಸ ತುಂಬಿದ ಯಾವುದೇ ಲಾರಿಗಳು ಈ ಕಡೆಗೆ ಸುಳಿದಿಲ್ಲ. ಪ್ರತಿದಿನ ಸುಮಾರು 170ಕ್ಕೂ ಹೆಚ್ಚಿನ ಲಾರಿಗಳು ಬಿಬಿಎಂಪಿ ಯಿಂದ ಇಲ್ಲಿಗೆ ಕಸ ತುಂಬಿಕೊಂಡು ಬಂದು ಸುರಿಯುತ್ತಿದ್ದು ಕಸದ ದಾರಿಗಳಿಗೆ ಪ್ರವೇಶ ಇಲ್ಲದಂತಾಗಿದೆ.