ಬೆಂಗಳೂರು: ನಗರದಲ್ಲಿ ರಸ್ತೆಗುಂಡಿಗಳಿಂದಾಗಿ ಸಂಭವಿಸುವ ಅಪಘಾತಕ್ಕೆ ಬಿಬಿಎಂಪಿಯೇ ಹೊಣೆ ಎಂದು ಪುನರುಚ್ಚರಿಸಿ ರುವ ಹೈಕೋರ್ಟ್, ಅಂತಹ ಅಪಘಾತ ಗಾಯಾಳುಗಳಿಗೆ ಪರಿಹಾರ ನೀಡುವ ಕುರಿತು ಸಾರ್ವಜನಿಕ ಪ್ರಕಟಣೆ ಮೂಲಕ ವ್ಯಾಪಕ ಪ್ರಚಾರ ನೀಡಬೇಕು ಎಂದು ಬಿಬಿಎಂಪಿಗೆ ಆದೇಶಿಸಿದೆ.
ಈ ಕುರಿತಂತೆ ಕೋರಮಂಗಲದ ವಿಜಯ್ ಮೆನನ್ ಮತ್ತಿತರರು 2015ರಲ್ಲಿ ಸಲ್ಲಿಸಿರುವ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾ.ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಸೋಮವಾರ ಬಿಬಿಎಂಪಿಗೆ ಈ ನಿರ್ದೇಶನ ನೀಡಿತು.
ಗಾಯಾಳುಗಳಿಗೆ ಪರಿಹಾರದ ಬಗ್ಗೆ 10 ದಿನಗಳಲ್ಲಿ ಸಾರ್ವಜನಿಕರಿಗೆ ಬಿಬಿಎಂಪಿ ವ್ಯಾಪಕ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದ ನ್ಯಾಯಪೀಠ, ನ.11ರೊಳಗೆ ಆ ಬಗ್ಗೆ ಕೋರ್ಟ್‌ಗೆ ವಿವರ ನೀಡಬೇಕು ಎಂದೂ ನಿರ್ದೇಶನ ನೀಡಿದೆ. ನಗರದ ರಸ್ತೆಗಳ ಸ್ಥಿತಿಗತಿ ಬಗ್ಗೆ ಯಾರೇ ದೂರು ನೀಡಿದರೂ ಪಾಲಿಕೆ ಕ್ರಮ ಕೈಗೊಳ್ಳಬೇಕು, ಯಾವುದೇ ವ್ಯಕ್ತಿ ಗುಂಡಿಗಳಿಂದ ಅಪಘಾತಕ್ಕೆ ಒಳಗಾದರೆ ಅಂತಹವರಿಗೆ ಪರಿಹಾರವನ್ನೂ ಸಹ ನೀಡಬೇಕು ಎಂದೂ ಈ ಹಿಂದೆ ಸ್ಪಷ್ಟವಾಗಿದೆ
ಹೇಳಲಾಗಿದೆ. ಈಗ ಮತ್ತೂಮ್ಮೆ ಪುನರುತ್ಛರಿಸಲಾಗುತ್ತಿದೆ ಎಂದು ನ್ಯಾಯಪೀಠ ಬಿಬಿಎಂಪಿಗೆ ಹೇಳಿತು. ಇದೇ ವೇಳೆ, ರಸ್ತೆ ಗುಂಡಿಗಳ ಅಪಘಾತಗಳಿಂದ ಗಾಯಗೊಂಡವರಿಗೆ ಪರಿಹಾರ ನೀಡಿದರೆ, ಬೇರೆ ಪರಿಣಾಮ ಗಳು ಉಂಟಾಗಬಹುದು. ಪರಿಹಾರಕ್ಕೆ ಎಲ್ಲರೂ ಅರ್ಜಿ ಸಲ್ಲಿಸಲು ಪ್ರಾರಂಭಿಸುತ್ತಾರೆ ಎಂದು ಆಯುಕ್ತರು ಸಲ್ಲಿಸಿದ ಪ್ರಮಾಣಪತ್ರಕ್ಕೆ ನ್ಯಾಯಪೀಠ ಅಸಮಧಾನ ವ್ಯಕ್ತಪಡಿಸಿತು