ಬೆಂಗಳೂರು: ಅನಧಿಕೃತ ಹೋರ್ಡಿಂಗ್, ಫ್ಲೆಕ್ಸ್ ಗೆ ಸಂಬಂಧಿಸಿದಂತೆ ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ ಬೆಂಗಳೂರು ನಗರದಲ್ಲಿ ಒಂದು ವರ್ಷಗಳ ಕಾಲ ಬ್ಯಾನರ್, ಫ್ಲೆಕ್ಸ್, ಹೋರ್ಡಿಂಗ್ ಹಾಕಲು ನಿಷೇಧಿಸುವ ನಿರ್ಣಯವನ್ನು ಬಿಬಿಎಂಪಿ ಸೋಮವಾರ ಕೈಗೊಂಡಿದೆ.
ಮುಂದಿನ ಒಂದು ವರ್ಷದ ಅವಧಿಗೆ ಫ್ಲೆಕ್ಸ್, ಬ್ಯಾನರ್ , ಭಿತ್ತಿಪತ್ರ ಸೇರಿದಂತೆ ಎಲ್ಲಾ ವಿಧದ ಜಾಹೀರಾತಿಗೂ ನಿಷೇಧ ಹೇರಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರು ತಿಳಿಸಿದ್ದಾರೆ.
2016ರ ಜನವರಿ ಬಳಿಕ ಪರವಾನಗಿ ನವೀಕರಿಸಿಲ್ಲ, ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಅಳವಡಿಸಿರುವ ಫ್ಲೆಕ್ಸ್, ಹೋರ್ಡಿಂಗ್ಸ್ ಅಧಿಕೃತವಲ್ಲ ಎಂದು ಮಾಹಿತಿ ನೀಡಿರುವ ಪ್ರಸಾದ್, ಒಂದು ವೇಳೆ ಇನ್ಮುಂದೆ ನಿಯಮದ ಪ್ರಕಾರ ಗೋಡೆ, ಮರದ ಮೇಲೆ ಬ್ಯಾನರ್, ಫ್ಲೆಕ್ಸ್, ಭಿತ್ತಿಪತ್ರ ಹಚ್ಚಿದರೆ ಒಂದು ಲಕ್ಷ ರೂಪಾಯಿ ದಂಡ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ವಿವರಿಸಿದ್ದಾರೆ.
ಮುಂದಿನ ಒಂದು ವರ್ಷದವರೆಗೆ ಸಿನಿಮಾ ಪೋಸ್ಟರ್ ಗೂ ಸಹ ನಿಷೇಧ ಹೇರಲಾಗಿದೆ. ಆರು ತಿಂಗಳ ಜೈಲುಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಬಿಬಿಎಂಪಿ ಮೇಯರ್ ಸಂಪತ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲು 15 ದಿನ ಗಡುವು:
ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಅನ್ನು 15 ದಿನದೊಳಗೆ ತೆರವುಗೊಳಿಸಬೇಕು ಇಲ್ಲದಿದ್ದರೆ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.