ಬೆಂಗಳೂರು: ಸಾರ್ವಜನಿಕರು ಪಾವತಿಸುವ ತೆರಿಗೆಯೇ ಪಾಲಿಕೆಗೆ ಆದಾಯದ ಮೂಲ. ಆದರೆ ಬಿಬಿಎಂಪಿ ತಾನು ಗುರಿಯಿಟ್ಟುಕೊಂಡಷ್ಟು ತೆರಿಗೆ ಸಂಗ್ರಹಿಸಲು ಆಗುತ್ತಿಲ್ಲ. ಪಾಲಿಕೆಯ ಎಂಟೂವಲಯ ವ್ಯಾಪ್ತಿಯಲ್ಲಿ 18 ಲಕ್ಷಕ್ಕೂ ಅಧಿಕ ಸ್ವತ್ತುಗಳಿದ್ದರೂ ಪಾಲಿಕೆ ನಿರೀಕ್ಷೆ ಮಾಡಿದ್ದಷ್ಟು ಬೊಕ್ಕಸದ ಕೈಚೀಲ ತುಂಬುತ್ತಿಲ್ಲ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ವರ್ಷದಲ್ಲಿ ಸುಮಾರು 4,561 ಕೋಟಿ ರೂ.ಆಸ್ತಿ ಸಂಗ್ರಹಿಸುವ ಗುರಿ ಹೊಂದಿದೆ. ಆದರೆ ಆಗಸ್ಟ್ ತಿಂಗಳ ಮೊದಲಾರ್ಧದಲ್ಲಿ ಕೇವಲ 73.52 ಕೋಟಿ ರೂ. ಸಂಗ್ರಹವಾಗಿದೆ. ಏಪ್ರಿಲ್‌ನಿಂದ ಆಗಸ್ಟ್ 15ರ ವರೆಗಿನ ಅಂಕಿ-ಅಂಶದ ಪ್ರಕಾರ 2,512 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ.
ಏಪ್ರಿಲ್, ಜೂನ್‌ನಲ್ಲಿ ಉತ್ತಮವ ರೀತಿಯಲ್ಲಿ ತೆರಿಗೆ ಸಂಗ್ರಹವಾಗಿದೆ. ಈ ಅವಧಿಯಲ್ಲಿ 2,246 ಕೋಟಿ ರೂ. ಸ್ವತ್ತು ತೆರಿಗೆ ಮೂಲಕ ಪಾಲಿಕೆ ಬೊಕ್ಕಸ ಕೈಚೀಲ ಸೇರಿದೆ. ಆದರೆ ಆಗಸ್ಟ್ ತಿಂಗಳ ಮೊದಲಾರ್ಧದಲ್ಲಿ ಹೇಳಿಕೊಳ್ಳುವಂತ ತೆರಿಗೆ ಪಾವತಿಯಾಗಿಲ್ಲ. ಸ್ವತ್ತು ತೆರಿಗೆ ಕಟ್ಟುವ ವಿಚಾರದಲ್ಲಿ ಮಹದೇವಪುರ ಮೊದಲ ಸ್ಥಾನದಲ್ಲಿದ್ದು, ಚಾಮರಾಜ ಪೇಟೆ ಕೊನೆ ಸ್ಥಾನದಲ್ಲಿದೆ. ಈಗಾಗಲೇ ಶೇ.55ರಷ್ಟು ತೆರಿಗೆ ಸಂಗ್ರಹವಾಗಿದ್ದು, ಇನ್ನೂ ಶೇ.45 ರಷ್ಟು ತೆರಿಗೆ ಸಂಗ್ರಹಿಸಬೇಕಾಗಿದೆ. ಈ ದೃಷ್ಟಿಯಿಂದಾಗಿ ಈಗಾಗಲೇ ಪಾಲಿಕೆ ಮುಖ್ಯ ಆಯುಕ್ತರು ಕೂಡ ತೆರಿಗೆ ಸಂಗ್ರಹ ಹೆಚ್ಚಳ ಸಂಬಂಧ ಹಿರಿಯ ಅಧಿಕಾರಿಗಳಿಗೆ ಟಾರ್ಗೆಟ್ ನೀಡಿದ್ದಾರೆ.
2020 -21ನೇ ಸಾಲಿನಲ್ಲಿ 2,800 ಕೋಟಿ ರೂ., 2021-22ನೇ ಸಾಲಿನಲ್ಲಿ 3,100 ಕೋಟಿ ರೂ. ಸಂಗ್ರಹವಾಗಿತ್ತು. ಈ ವರ್ಷ 4,561 ಕೋಟಿ ರೂ. ಸಂಗ್ರಹದ ಗುರಿ ಹೊಂದಲಾಗಿದೆ.
ಹೊಸದಾಗಿ ಟೆಂಡರ್ ನಡೆಸಿಲ್ಲ: ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ಪಾಲಿಕೆಗೆ ಸೇರಿದ ವಾಣಿಜ್ಯ ಕಟ್ಟಡಗಳ ಒಪ್ಪಂದದ ಅವಧಿ ಪೂರ್ಣಗೊಂಡಿದೆ. ಆದರೂ ಹಲವು ಮಾಲೀಕರು ತೆರಿಗೆ ಕಟ್ಟದೆಯೇ ಹಾಗೆಯೇ ಮುಂದುವರಿದ್ದಾರೆ. ಜತೆಗೆ ಬಿಬಿಎಂಪಿ ಅಧಿಕಾರಿಗಳು ಕೂಡ ಒಪ್ಪಂದ ಪೂರ್ಣಗೊಂಡಿರುವ ಮಾಲೀಕರಿಂದ ತಮ್ಮ ಸ್ವತ್ತನ್ನು ಮರಳಿ ಪಡೆಯುವ ಕೆಲಸಕ್ಕೆ ಮುಂದಾಗಿಲ್ಲ. ಈ ಎಲ್ಲ ಕಾರಣಗಳಿಂದಾಗಿಯೇ ಪಾಲಿಕೆ ಬೊಕ್ಕಸದ ಕೈ ಚೀಲ ತುಂಬುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಕೆಲವು ಪ್ರದೇಶಗಳಲ್ಲಿ ವಾಣಿಜ್ಯ ಕಟ್ಟಡಗಳ ಮಾಲೀಕರು ತಪ್ಪು ಮಾಹಿತಿ ನೀಡಿ ಆಸ್ತಿ ಘೋಷಣೆ ಮಾಡಿಕೊಂಡಿರುವುದು ಕೂಡ ಬೆಳಕಿಗೆ ಬಂದಿದೆ. ಅದರ ಜತೆಗೆ ಸಾವಿರೂರು ಸಂಖ್ಯೆಯಲ್ಲಿ ಕಟ್ಟಡಗಳ ಮಾಲೀಕರು ಆಸ್ತಿ ತೆರಿಗೆ ಘೋಷಣೆ ಮಾಡಿಕೊಂಡಿಲ್ಲ ಎಂಬ ದೂರುಗಳಿವೆ.
ದೊಡ್ಡ ಮಾಲ್ ಮತ್ತು ಪಂಚಾತಾರ ಹೋಟೆಲ್ ಮಾಲೀಕರು ಕೂಡ ದೊಡ್ಡ ಮೊತ್ತ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಪಾಲಿಕೆ ಆದಾಯ ಸೋರಿಕೆ ಸಂಬಂಧ ಹಿರಿಯ ಅಧಿಕಾರಿ ಗಳು ಎಚ್ಚರಿಕೆ ವಹಿಸಬೇಕು. ಜತೆಗೆ ಕೆಳಹಂತದ ಅಧಿಕಾರಿಗಳು ಕೂಡ ಕಾಳಜಿವಹಿಸಿ ಕೆಲಸ ಮಾಡಬೇಕು. ಬಿಬಿಎಂಪಿಯ ತೆರಿಗೆ ಬೊಕ್ಕಸದ ಕೈಚೀಲ ತುಂಬಬೇಕಾದರೆ ಪ್ರತಿ ಎರಡು ವರ್ಷಕ್ಕೊಮ್ಮೆ ಪಾಲಿಕೆಯ ತೆರಿಗೆ ಮತ್ತು ಕಂದಾಯ ವಿಭಾಗದ ಅಧಿಕಾರಿಗಳು ವರ್ಗಾವಣೆ ಆಗಬೇಕು. -ಜಿ. ಪದ್ಮಾವತಿ, ಮಾಜಿ ಮೇಯರ್
ಕಟ್ಟಡಗಳನು ಪತ್ತೆ ಹಚ್ಚಲು: ಪಾಲಿಕೆ ವಿಫಲ ತೆರಿಗೆ ಘೋಷಣೆ ಮಾಡದ ಕಟ್ಟಡಗಳನ್ನು ಪತ್ತೆ ಮಾಡುವಲ್ಲಿ ಬಿಬಿಎಂಪಿ ಅಧಿಕಾರಿಗಳು ಕೂಡ ವಿಫಲರಾಗಿದ್ದಾರೆ. ಜತೆಗೆ ತಪ್ಪು ಮಾಹಿತಿ ನೀಡಿದ ಆಸ್ತಿ ಘೋಷಿಸಿಕೊಂಡಿರದ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಸುಮ್ಮನಾಗಿಬಿಟ್ಟಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 18,55,802 ಆಸ್ತಿಗ ಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗಿದೆ. 2021-22ನೇ ಸಾಲಿನಲ್ಲಿ ಈವರೆಗೂ ಸ್ವಯಂ ಘೋಷಣೆ ಆಸ್ತಿ ತೆರಿಗೆ ಅಡಿಯಲ್ಲಿ 13,56,087 ಸ್ವತ್ತುಗಳಿಂದ ಆಸ್ತಿ ತೆರಿಗೆ ಪಾವತಿ ಆಗಿದೆ. ಇದರಲ್ಲಿ 97,057 ವಾಣಿಜ್ಯ ಕಟ್ಟಡಗಳು, 9112 ಬಹುಮಹಡಿ ವಸತಿ ಸಂಕೀರ್ಣಗಳು ಜತೆಗೆ 12,59,030 ವಸತಿ ಯೋಗ್ಯ ಮನೆಗಳು ಸೇರಿವೆ. ಸುಮಾರು 578 ಬಹುಮಹಡಿ ವಸತಿ ಸಂಕೀರ್ಣಗಳು ಪಾಲಿಕೆಗೆ ತೆರಿಗೆ ಪಾವತಿಸುತ್ತಿವೆ.
-ದೇವೇಶ ಸೂರಗುಪ್ಪ