ಬೆಂಗಳೂರು: ಮಳೆಗಾಲಕ್ಕಾಗಿಯೇ ಬಿಬಿಎಂಪಿ ಹಲವು ರೀತಿಯಲ್ಲಿ ತಯಾರಾಗಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಮಳೆಗಾಲಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿದ್ಧವಾಗಿದೆ. ಹೊಸಕೆರೆಹಳ್ಳಿ ಸೇರಿದಂತೆ ಮಳೆನೀರು ನಿಲ್ಲುವ ಹಲವು ಪ್ರದೇಶಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಪಾಲಿಕೆಯ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ ಎಂದರು.
ಈ ಹಿಂದೆ ಸಿಲಿಕಾನ್ ಸಿಟಿಯಲ್ಲಿ ಮಳೆ ನೀರು ನಿಲ್ಲುವ ಬಗ್ಗೆ ಸಂಚಾರಿ ಪೋಲಿಸರಿಂದಲೂ ಸಮೀಕ್ಷೆ ನಡೆಸಲಾಗಿತ್ತು. ರಾಜಧಾನಿಯ ವ್ಯಾಪ್ತಿಯ 150ರಿಂದ 160 ಸ್ಥಳಗಳಲ್ಲಿ ಪ್ರವಾಹದ ನೀರು ನಿಲ್ಲಲಿದೆ ಎಂದು ಗುರುತಿಸಲಾಗಿತ್ತು. ಅದರಲ್ಲೀಗ ಕೇವಲ 15 ರಿಂದ 16 ಪ್ರವಾಹ ಸ್ಥಳಗಳಿವೆ. ಅಲ್ಲಿ ಕೂಡ ಸುರಕ್ಷಿತವಾಗಿ ಪ್ರವಾಹದ ನೀರು ಹರಿದು ಹೋಗುವ ನಿಟ್ಟಿನಲ್ಲಿ ತಾತ್ಕಲಿಕ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ರಾಜಕಾಲುಗಳ ಸ್ವತ್ಛತಾ ಕಾರ್ಯಕೂಡ ನಡೆದಿದೆ. ಈ ಹಿಂದೆ ಬೆಂಗಳೂರು ನಗರದಲ್ಲಿ 60 ರಿಂದ 70 ಮಿಲಿಮೀಟರ್ ನಷ್ಟು ಮಳೆ ಸುರಿದಿದೆ. ಅದಕ್ಕೆ ತಕ್ಕಂತೆ ಪಾಲಿಕೆ ಅಧಿಕಾರಿಗಳು ಕೂಡ ಸಿದ್ಧತೆ ನಡೆಸಿದ್ದಾರೆ. ಜತೆಗೆ ಒಣಗಿದ ಮರದ ಕೊಂಬೆಗಳ ಕಟಾವು ಕೂಡ ನಡೆದಿದೆ. ಮಳೆಗಾಲದಲ್ಲಿ ಪ್ರವಾಹದ ನೀರು ನಿಲ್ಲದ ರೀತಿ ಕಾರ್ಯ ನಿರ್ವಹಿಸಲು ಪಾಲಿಕೆ ಸಿಬ್ಬಂದಿ ಸಜ್ಜಾಗಿದ್ದಾರೆ ಎಂದರು.
ಈಗಾಗಲೇ ತೆರವು ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಶೀಘ್ರದಲ್ಲೆ ಮತ್ತೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು. ನಾಲ್ಕೈದು ಕಡೆಗಳಲ್ಲಿ ಕಾರ್ಯಾಚರಣೆಗೆ ನ್ಯಾಯಲ ತಡೆಯಾಜ್ಞೆ ನೀಡಿದೆ. ಇದರ ತೆರವಿಗಾಗಿ ನ್ಯಾಯಾಲಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಕೆಲವು ಕಡೆ ರಸ್ತೆ ಸೇರಿದಂತೆ ಇನ್ನಿತರ ಕಾರ್ಯಕ್ಕಾಗಿ ಜಮೀನು ತುರ್ತು ಅಗತ್ಯವಿದೆ. ಕಂದಾಯ ಭೂಮಿ ಆಗಿರದಿದ್ದರೆ ಅಂತಹ ಪ್ರದೇಶಗಳಲ್ಲಿ ಜನರಿಗೆ ಪರಿಹಾರ ಧನ ನೀಡಿ ಭೂಮಿಯನ್ನು ಬಳಸಿಕೊಳ್ಳುವ ಆಲೋಚನೆಯಿದೆ. ರಾಜಧಾನಿ ವ್ಯಾಪ್ತಿಯ ಮಾನ್ಯತಾ ಟೆಕ್‌ಪಾರ್ಕ್, ವೈಟ್ ಫೀಲ್ಡ್ , ಹೂಡಿ, ಕೆ.ಆರ್.ಪುರಗಳಲ್ಲಿ ರಾಜಕಾಲುವೆ ಸೇರಿದಂತೆ ಸರ್ಕಾರ ಜಮೀನಿನ ಒತ್ತುವರಿ ತೆರವು ನಡೆಯಲಿದೆ ಎಂದು ತಿಳಿಸಿದರು.