Advertisement

ಸಾಕು ನಾಯಿಗೆ ಪರವಾನಗಿ ಕಡ್ಡಾಯಗೊಳಿಸಿ ಬಿಬಿಎಂಪಿ ಆದೇಶ

11:53 AM Jun 05, 2018 | |

ಬೆಂಗಳೂರು: ಬೆಂಗಳೂರಿನಲ್ಲಿರುವ ಸಾಕು ನಾಯಿಗಳಿಗೆ ಪರವಾನಗಿ ಪಡೆಯುವುದು ಕಡ್ಡಾಯಗೊಳಿಸಿ ಬಿಬಿಎಂಪಿ ಆಯುಕ್ತರು ಸೋಮವಾರ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಸಾಕುನಾಯಿಗಳಿಗೆ ಪರವಾನಗಿ ಪಡೆಯದವರು ಇನ್ನುಮುಂದೆ ದಂಡ ಪಾವತಿಸಬೇಕಾಗುತ್ತದೆ. 

Advertisement

ಬೀದಿ ನಾಯಿಗಳ ಕಾರ್ಯಾಚರಣೆ ವೇಳೆ ಸುಲಭವಾಗಿ ಸಾಕು ನಾಯಿಗಳನ್ನು ಗುರುತಿಸಲು ಹಾಗೂ ನಾಯಿಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸಿರುವ ಮಾಹಿತಿ ತಿಳಿಯುವ ಉದ್ದೇಶದಿಂದ ಪರವಾನಗಿ ಕಡ್ಡಾಯಗೊಳಿಸಲಾಗಿದೆ. ಪಾಲಿಕೆಯ ಪ್ರಸ್ತಾವನೆಗೆ ನಗರಾಭಿವೃದ್ಧಿ ಇಲಾಖೆಯಿಂದ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಪರವಾನಗಿ ಕಡ್ಡಾಯಗೊಳಿಸಿ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ. 

ಪಾಲಿಕೆ ವ್ಯಾಪ್ತಿಯಲ್ಲಿ ನಾಯಿ ಸಾಕುವವರಿಗೆ 12 ಷರತ್ತುಗಳನ್ನು ವಿಧಿಸಲಾಗಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸದವರು ದಂಡ ಪಾವತಿಸಬೇಕಾಗುತ್ತದೆ. ಅಪಾರ್ಟ್‌ಮೆಂಟ್‌ಗಳ ಫ್ಲ್ಯಾಟ್‌ಗಳಲ್ಲಿ ನೆಲೆಸಿದವರಿಗೆ ಒಂದು ನಾಯಿ ಹಾಗೂ ಇತರೆಡೆ ಮನೆಗೆ 3 ನಾಯಿ ಸಾಕಲು ಬಿಬಿಎಂಪಿ ಅವಕಾಶ ನೀಡಿದ್ದು, ಅಕ್ಕಪಕ್ಕದ ಮನೆಯವರಿಗೆ ನಾಯಿ ಹಾವಳಿಯಿಂದ ತೊಂದರೆಯಾಗಬಾರದೆಂಬ ಷರತ್ತು ವಿಧಿಸಲಾಗಿದೆ. 

ನೀವೇ ಸ್ವತ್ಛಗೊಳಿಸಬೇಕು: ಸಾಕು ನಾಯಿ ಮಾಲೀಕರು ತಮ್ಮ ನಾಯಿಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಿಸುವಂತಿಲ್ಲ. ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಸಾಕು ನಾಯಿಗಳು ಮಲ-ಮೂತ್ರ ಮಾಡಿದರೆ ಮಾಲೀಕರೇ ಅದನ್ನು ಸುಚಿಗೊಳಿಸಬೇಕು. ಅದನ್ನು ತಪ್ಪಿದ್ದಲ್ಲಿ ಪಾಲಿಕೆಯಿಂದ ಮೊದಲ ಬಾರಿಗೆ 100 ರೂ. ಹಾಗೂ ಆನಂತರದಲ್ಲಿ 200 ರೂ. ದಂಡ ವಿಧಿಸಲಾಗುತ್ತದೆ. 

ಮೈಕ್ರೋ ಚಿಪ್‌ ಕಡ್ಡಾಯ: ನಾಯಿಯ ಮಾಲೀಕರು ಪಾಲಿಕೆಯಿಂದ ಪರವಾನಗಿ ಪಡೆಯುವುದರೊಂದಿಗೆ ನಾಯಿಗೆ ತಮ್ಮದೇ ಖರ್ಚಿನಲ್ಲಿ ಮೈಕ್ರೋ ಚಿಪ್‌ ಅಳವಡಿಸಿಕೊಳ್ಳಬೇಕು. ಇದರಿಂದಾಗಿ ನಾಯಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸಿರುವ ಹಾಗೂ ಮಾಲೀಕರ ಮಾಹಿತಿ ಸುಲಭವಾಗಿ ಲಭ್ಯವಾಗಲಿದೆ. 

Advertisement

ಅನಾಥ ನಾಯಿಗಳ ಹರಾಜು: ಸಾಕು ನಾಯಿ ಬೀದಿಯಲ್ಲಿ ಅನಾಥವಾಗಿ ಓಡಾಡುತ್ತಿದ್ದರೆ ಅಂತಹ ನಾಯಿಯನ್ನು ಪಾಲಿಕೆಯ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ನಾಯಿ ಮಾಲೀಕರು 72 ಗಂಟೆಗಳಲ್ಲಿ 450 ರೂ. ದಂಡ ಪಾವತಿಸಿ ಅದನ್ನು ಬಿಡಿಸಿಕೊಂಡು ಹೋಗಬೇಕು. ಇಲ್ಲವಾದರೆ ಅಂತಹ ನಾಯಿಯನ್ನು ಹರಾಜು ಅಥವಾ ದತ್ತು ನೀಡಲಾಗುತ್ತದೆ. ಇಲ್ಲವೆ ಪಾಲಿಕೆಯ ನಾಯಿಗೂಡುಗಳಲ್ಲಿ ಇರಿಸಿ ಸಾಕಲಾಗುತ್ತದೆ. 

ಲೈಸೆನ್ಸ್‌ ಪಡೆಯದಿದ್ದರೆ ದಂಡ: ನಾಯಿಗಳಿಗೆ ಪರವಾನಗಿ ಪಡೆಯಲು ಕಾಲವಕಾಶ ನೀಡಿದ ನಂತರವೂ ಮಾಲೀಕರು ಪರವಾನಗಿ ಪಡೆಯದಿದ್ದರೆ, ಅಂತಹವರಿಗೆ 1,000 ರೂ. ದಂಡ ವಿಧಿಸಲಾಗುತ್ತದೆ. ದಂಡ ಪಾವತಿಸಿ ಪರವಾನಗಿ ಪಡೆಯದಂತಹ ಮಾಲೀಕರ ನಾಯಿಯನ್ನು ಪಾಲಿಕೆ ಸಿಬ್ಬಂದಿ ನಾಯಿಯನ್ನು ವಶಕ್ಕೆ ಪಡೆಯಲಿದ್ದಾರೆ.

ಉದಯವಾಣಿ ಪ್ರಕಟಿಸಿತ್ತು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಸಾಕು ನಾಯಿಗಳಿಗೆ ಪರವಾನಗಿ ಕಡ್ಡಾಯಗೊಳಿಸುವ ಕುರಿತಂತೆ ಶೀಘ್ರದಲ್ಲಿಯೇ ಬಿಬಿಎಂಪಿ ಅಧಿಸೂಚನೆ ಹೊರಡಿಸಲಿರುವ ಕುರಿತಂತೆ ಉದಯವಾಣಿ ಜೂನ್‌ 1 ರಂದು “ಶ್ವಾನ ಪಾಲನೆಗೆ ಬೇಕು ಲೈಸೆನ್ಸ್‌’ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ಪಾಲಿಕೆ ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ ಪರವಾನಗಿ ಕಡ್ಡಾಯಗೊಳಿಸುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ. ಹೀಗಾಗಿ ಸಾಕಿ ಸಾಕುವವರು ಇನ್ನು ಮುಂದೆ ಪರವಾನಗಿ ಪಡೆಯಲು ಮುಂದಾಗಬೇಕು. 
-ಡಾ.ಆನಂದ್‌, ಬಿಬಿಎಂಪಿ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next