ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲ ರಸ್ತೆಗುಂಡಿಗಳನ್ನು ಇನ್ನು 15ದಿನಗಳಲ್ಲಿ ಮುಚ್ಚುವಂತೆ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮಲ್ಲೇಶ್ವರಂ ಐಪಿಪಿ ತರಬೇತಿ ಕೇಂದ್ರದಲ್ಲಿ ಬಿಬಿಎಂಪಿಯ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಅಧಿಕಾರಿಗಳೊಂದಿಗೆ ಆಯುಕ್ತರು ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿರುವ ಆರ್ಟಿರಿಯಲ್ (ಅತಿ ಮುಖ್ಯ ರಸ್ತೆಗಳು) ಹಾಗೂ ಸಬ್ ಆರ್ಟಿರಿಯಲ್ (ಮುಖ್ಯ ರಸ್ತೆಗಳಲ್ಲಿ) ಸೃಷ್ಟಿಯಾಗಿರುವ ರಸ್ತೆಗುಂಡಿಗಳು ಮುಂದಿನ 15 ದಿನಗಳ ಒಳಗಾಗಿ ಮುಚ್ಚುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ನಗರದಲ್ಲಿ 1,400 ಕಿ.ಮೀ ಉದ್ದ ಪ್ರಮುಖ ರಸ್ತೆಗೆ ಸೇರುತ್ತದೆ. ಈ ವ್ಯಾಪ್ತಿಯಲ್ಲಿ ನಗರದ ಶೇ.75ರಷ್ಟು ವಾಹನ ಸಂಚಾರ ಇರುತ್ತದೆ. ಹೀಗಾಗಿ, ಆದ್ಯತೆಯ ಮೇರೆಗೆ ರಸ್ತೆಗುಂಡಿ ಮುಚ್ಚುವಂತೆ ಸೂಚನೆ ನೀಡಲಾಗಿದೆ. ಇದೀಗ ಪಾಲಿಕೆ ವತಿಯಿಂದ ಡಾಂಬರು ಮಿಶ್ರಣ ಘಟಕ ಸ್ಥಾಪಿಸಲಾಗಿದೆ. ಇದರಿಂದ ನಿತ್ಯ 50 ರಿಂದ 60 ಟ್ರಕ್ ಹಾಟ್ ಮಿಕ್ಸ್ ಡಾಂಬರನ್ನು ಉತ್ಪಾದಿಸಬಹುದಾಗಿದೆ. ಪೈಥಾನ್ ಯಂತ್ರಗಳಿರುವ ಕಡೆ ಅದೇ ಯಂತ್ರಗಳಿಂದಲೇ ರಸ್ತೆಗುಂಡಿ ಮುಚ್ಚಿ ಹಾಗೂ ದೋಷ ಮುಕ್ತ ಅವಧಿಯಲ್ಲಿರುವ ರಸ್ತೆಗಳಲ್ಲಿ ಗುತ್ತಿಗೆದಾರರಿಂದಲೇ ರಸ್ತೆಗುಂಡಿಗಳನ್ನು ಮುಚ್ಚಿಸುವಂತೆ ತಿಳಿಸಲಾಗಿದೆ. ಇನ್ನು ಉಳಿದ ಪ್ರದೇಶಗಳಲ್ಲಿ ಡಾಂಬರು ಮಿಶ್ರಣ ಘಟಕದಿಂದ ಡಾಂಬರು ಪಡೆದು ಗುಂಡಿಗಳನ್ನು ಮುಚ್ಚಲು ಸೂಚಿಸಲಾಗಿದೆ. ಕಸ ಗುಡಿಸುವ ಯಂತ್ರಗಳ ಮೂಲಕ ಸ್ವಚ್ಛತೆ ಕಾಪಾಡಿಕೊಳ್ಳಲು ಹಾಗೂ ಒಳಚರಂಡಿಗಳಲ್ಲಿ ಹೂಳು ತೆಗೆಯಲು ಸಹ ಸೂಚನೆ ನೀಡಲಾಗಿದೆ ಎಂದರು.
ಈ ವೇಳೆ ಬಿಬಿಎಂಪಿಯ ರಸ್ತೆ ಮುಲಭೂತ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಪ್ರಹ್ಲಾದ್, ಅಧೀಕ್ಷಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಸಹಾಯಕ ಎಂಜಿನಿಯರ್, ಅಧಿಕಾರಿಗಳು ಹಾಜರಿದ್ದರು.