Advertisement
ಜಲಮಂಡಳಿ, ಬೆಸ್ಕಾಂ, ಮೆಟ್ರೋ, ಪೊಲೀಸ್ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಪಡೆಯುವ ಉದ್ದೇಶದಿಂದ ಮೇಯರ್ ಸಂಪತ್‌ರಾಜ್ ಸೋಮವಾರ ಕರೆದಿದ್ದ ವಿಶೇಷ ಸಭೆಯಲ್ಲಿ ಪಾಲಿಕೆ ಸದಸ್ಯರು, ರಾಜಧಾನಿಯಲ್ಲಿನ ಗಾಂಜಾ ಮಾಫಿಯಾಗೆ ಕಡಿವಾಣ ಹಾಕುವಂತೆ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದರು.
Related Articles
Advertisement
ಪಾಲಿಕೆ ಸದಸ್ಯ ಡಾ.ಸ್. ರಾಜು ಮಾತನಾಡಿ, ಕೆಲ ಪುಂಡರು ಸಂಜೆಯಾಗುತ್ತಿದ್ದಂತೆ ಶಾಲೆ ಆವರಣ ಹಾಗೂ ಪಾರ್ಕ್‌ಗಳಲ್ಲಿ ಗಾಂಜಾ ಸೇವಿಸುವುದು, ಮದ್ಯಪಾನ ಮಾಡುವುದು ಸಾಮಾನ್ಯವಾಗಿದೆ. ಈ ಕುರಿತು ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಪುಂಡರು ಕುಡಿದ ನಂತರ ಮದ್ಯದ ಬಾಟಲಿ ಒಡೆಯುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು.
ಗ್ಯಾಂಬ್ಲಿಂಗ್ ನಡೆಯುತ್ತಿದೆ: ಜೆ.ಜೆ.ನಗರದಲ್ಲಿ ಗಾಂಜಾ ಮಾರಾಟದೊಂದಿಗೆ ಮಟ್ಕಾ, ಇಸ್ಪಿಟ್ ಹಾಗೂ ಗ್ಯಾಂಬ್ಲಿಂಗ್ ನಡೆಸಲಾಗುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಜತೆಗೆ ನನಗೆ ಭೂಗತ ಲೋಕದ ರವಿ ಪೂಜಾರಿ ಅವರಿಂದ ಜೀವ ಬೆದರಿಕೆ ಕರೆ ಬಂದಿದ್ದು, ರಕ್ಷಣೆ ನೀಡಬೇಕು ಎಂದು ವಾರ್ಡ್‌ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಪೊಲೀಸ್ ಅಧಿಕಾರಿಗಳನ್ನು ಇಮ್ರಾನ್ ಪಾಷಾ ಕೋರಿದರು.
ವಿದೇಶಿಗರ ಮನೆ ತಪಾಸಣೆ ನಡೆಸಿ: ಬೇರೆ ದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಕೊಠಡಿಗಳನ್ನು ಅಲ್ಲಿನ ಪೊಲೀಸರು ಪರಿಶೀಲಿಸುತ್ತಾರೆ. ಆದರೆ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬಂದಿರುವ ವಿದೇಶಿ ವಿದ್ಯಾರ್ಥಿಗಳ ಮನೆಗಳನ್ನೇಕೆ ನಗರ ಪೊಲೀಸರು ಪರಿಶೀಲಿಸುವುದಿಲ್ಲ? ನಗರದಲ್ಲಿ ನಡೆಯುತ್ತಿರುವ ಮಾದಕ ವಸ್ತು ಸಾಗಣೆ, ಮಾರಾಟ ಪ್ರಕರಣಗಳಲ್ಲಿ ವಿದೇಶಿ ವಿದ್ಯಾರ್ಥಿಗಳೇ ಹೆಚ್ಚು ಭಾಗಿಯಾಗಿರುವ ಕಾರಣ ಅವರ ಮನೆ, ಕೊಠಡಿಗಳನ್ನು ಪರಿಶೀಲಿಸಲು ಪೊಲೀಸರು ಮುಂದಾಗಬೇಕು ಎಂದು ಬಿಜೆಪಿ ಸದಸ್ಯ ಗೌತಮ್ ಕುಮಾರ್ ಒತ್ತಾಯಿಸಿದರು.
ಮೂರು ಪಟ್ಟು ಹೆಚ್ಚು ಮಾದಕ ಪ್ರಕರಣ: ಪೊಲೀಸ್ ಇಲಾಖೆ ಪರವಾಗಿ ಸೋಮವಾರ ಪಾಲಿಕೆ ಕೌನ್ಸಿಲ್ ಸಭೆಗೆ ಬಂದಿದ್ದ ನಗರ ಅಪರಾಧ ವಿಭಾಗದ ಡಿಸಿಪಿ ಡಾ.ರಾಮ್‌ನಿವಾಸ್ ಸಪೆಟ್, “ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಗಾಂಜಾ ಮತ್ತಿತರ ಮಾದಕ ವಸ್ತು ಮಾರಾಟ ಮಾಡುವವರ ವಿರುದ್ಧ ಮೂರು ಪಟ್ಟು ಹೆಚ್ಚು ದೂರುಗಳನ್ನು ದಾಖಲಿಸಲಾಗಿದೆ. ಪಾಲಿಕೆ ಸದಸ್ಯರು ತಿಳಿಸಿರುವ ಸಮಸ್ಯೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲಾಗುವುದು,’ ಎಂದು ಭರವಸೆ ನೀಡಿದರು.
ಬ್ಯಾಂಕಾಕ್ ಬೆಂಗಳೂರಲ್ಲೇ ಇದೆ: “ಕಮ್ಮನಹಳ್ಳಿ, ಬಾಣಸವಾಡಿ ಭಾಗಗಳಲ್ಲಿ ವಿದೇಶಿಯರ ಹಾವಳಿ ಹೆಚ್ಚಾಗಿದ್ದು, ಕಮ್ಮನಹಳ್ಳಿ ರಸ್ತೆಯಲ್ಲಿ ಓಡಾಡಲು ನನಗೆ ಭಯವಾಗುತ್ತದೆ. ಕಮ್ಮನಹಳ್ಳಿ ರಸ್ತೆಯಲ್ಲಿ ನಡೆಯಬಾರದ್ದೆಲ್ಲ ನಡೆಯುತ್ತಿದ್ದರೂ ಅದರ ತಡೆಗೆ ಪೊಲೀಸರು ಮುಂದಾಗಿಲ್ಲ. ಬ್ಯಾಂಕಾಕ್‌ನಲ್ಲಿ ದೊರೆಯುವುದೆಲ್ಲ ಕಮ್ಮನಹಳ್ಳಿಯಲ್ಲೇ ದೊರೆಯುತ್ತಿದೆ. ಇದನ್ನು ತಡೆಯುವುದು ಒಂದೆಡೆ ಇರಲಿ, ಕನಿಷ್ಠ ಸರಗಳವು ಪ್ರಕರಣ ದಾಖಲಿಸಿಕೊಳ್ಳಲೂ ಸ್ಥಳೀಯ ಪೊಲೀಸರು ಮುಂದಾಗುತ್ತಿಲ್ಲ ಎಂದು ಎಂದು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಕಳವಳ ವ್ಯಕ್ತಪಡಿಸಿದರು.
ಟಾರ್ಗೆಟ್‌ಗಾಗಿ ಟೋಯಿಂಗ್: “ಸಾರ್ವಜನಿಕರು ಬ್ಯಾಂಕ್, ಆಸ್ಪತ್ರೆಗೆ ಹೋಗಲು ಐದು ನಿಮಿಷ ರಸ್ತೆ ಪಕ್ಕದಲ್ಲಿ ವಾಹನ ನಿಲ್ಲಿಸಿದರೂ ಸಂಚಾರ ಪೊಲೀಸರು ವಾಹನಗಳನ್ನು ಟೋಯಿಂಗ್ ಮಾಡಿ 800ರಿಂದ 900 ರೂ. ದಂಡ ಹಾಕುತ್ತಿದ್ದಾರೆ. ನಿಯಮದಂತೆ ವಾಹನ ಟೋಲ್ ಮಾಡುವ ಮುನ್ನ ಸೂಚನೆ ನೀಡಬೇಕು. ಆ ನಂತರವೂ ವಾಹನ ತೆಗೆಯದಿದ್ದರೆ ಟೋಯಿಂಗ್ ಮಾಡಬೇಕು. ಆದರೆ, ಯಾವುದೇ ಸೂಚನೆ ನೀಡದೆ ಟೋ ಮಾಡುವ ಪೊಲೀಸರು, ಇದನ್ನು ಪ್ರಶ್ನಿಸಿದರೆ ತಮಗೆ ಟಾರ್ಗೆಟ್ ಕೊಟ್ಟಿದ್ದಾರೆ ಎಂದು ಉಡಾಫೆ ಉತ್ತರ ನೀಡುತ್ತಾರೆ,’ ಎಂದು ವಿಶ್ವೇಶ್ವರಪುರ ವಾರ್ಡ್ ಸದಸ್ಯೆ ವಾಣಿ ವಿ. ರಾವ್ ಆಕ್ರೋಶ ವ್ಯಕ್ತಪಡಿಸಿದರು.
ನಾವೆಲ್ಲಿಂದ ಗಾಂಜಾ ತರೋಣ?: ಗಾಂಜಾ ಮಾರಾಟ ದಂಧೆಕೋರರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಪತ್ತೆ ಮಾಡಿದರೆ. “ಒಂದು ಕೆ.ಜಿ ಗಾಂಜಾ ದೊರೆತರೆ ಮಾತ್ರ ಪ್ರಕರಣ ದಾಖಲಿಸಲು ಸಾಧ್ಯ’ ಎಂದು ಕಾರಣ ಹೇಳಿ ಆರೋಪಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅವರ ವಿರುದ್ಧ ಪ್ರಕರಣ ದಾಖಲಿಸಲು ನಾವು ಎಲ್ಲಿಂದ ಒಂದು ಕೆ.ಜಿ ಗಾಂಜಾ ತರುವುದು” ಎಂದು ಅಂಜನಾಪುರ ವಾರ್ಡ್ ಸದಸ್ಯ ಸೋಮಶೇಖರ್ ಪ್ರಶ್ನಿಸಿದರು.