ಬೆಂಗಳೂರು: ಈ ಹಿಂದೆ ಬಿಜೆಪಿಯವರು 8500 ಕೋಟಿ ಸಾಲ ಹೊರಿಸಿದ್ದರು. ಟಿಡಿಆರ್ ಹಗರಣ ಮಾಡಿ ಹೋಗಿದ್ದರು. ಈಗ ಜನರ ಮೇಲೆ ಒಂದೊಂದೇ ತೆರಿಗೆ ಹಾಕುತ್ತಿದ್ದಾರೆ. ಕೋವಿಡ್ ನಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಹೈದರಾಬಾದ್ ನಲ್ಲಿ ಶೇ. 50 ರಷ್ಟು ತೆರಿಗೆ ಕಡಿಮೆ ಮಾಡಲಾಗಿದೆ. ಇಲ್ಲೂ ಅದೇ ರೀತಿ ಟ್ಯಾಕ್ಸ್ ಕಟ್ ಮಾಡಬೇಕು ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಯಾವುದೇ ಸಂದರ್ಭದಲ್ಲೂ ಬಿಬಿಎಂಪಿ ಚುನಾವಣೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ, ಕೆಪಿಸಿಸಿ ಕಚೇರಿಯಲ್ಲಿ ಬೆಂಗಳೂರಿನ ಕಾಂಗ್ರೆಸ್ ನಾಯಕರ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಅವರು, ಮನೆ ಕಟ್ಟುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಕಸ ಹಾಕುವವರ ಮೇಲೂ ತೊಂದರೆಯಾಗಿದೆ. ಕಸದ ಮೇಲೆ ಟ್ಯಾಕ್ಸ್ ಹೆಚ್ಚಳ ಮಾಡ್ತಿದ್ದಾರೆ. ಬಿಬಿಎಂಪಿ ಕೆಲಸಗಳು ನೆನೆಗುದಿಗೆ ಬಿದ್ದಿವೆ.
ಬಿಬಿಎಂಪಿ ಚುನಾವಣೆ ಅದಷ್ಟು ಬೇಗ ನಡೆಸಬೇಕು. 198 ವಾರ್ಡ್ ಗೆ ಅಥವಾ 243 ವಾರ್ಡ್ ಗೆ ಚುನಾವಣೆ ನಡೆಸಿದರೂ ಅಡ್ಡಿಯಿಲ್ಲ. ನಾವು ಎಲ್ಲದಕ್ಕೂ ರೆಡಿಯಿದ್ದೇವೆ.
ಬಿಬಿಎಂಪಿ ಸದಸ್ಯರು, ಮಾಜಿ ಸದಸ್ಯರು, ಬೆಂಗಳೂರು ಮುಖಂಡರ ಜೊತೆ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದೇವೆ. ಈಗಾಗಲೇ 243 ವಾರ್ಡ್ ಮಾಡಲಾಗಿದೆ ಈಗಿನಿಂದಲೇ ಪೂರ್ವ ತಯಾರಿ ಆರಂಭಿಸಿಲಾಗಿದೆ. ಮಾತ್ರವಲ್ಲದೆ ಹೆಚ್ಚು ವಾರ್ಡ್ ಗಳನ್ನು ಗೆಲ್ಲಲು ತಂತ್ರ ರೂಪಿಸಲಾಗಿದೆ ಎಂದರು.
ಸಭೆಯಲ್ಲಿ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಕೃಷ್ಣ ಭೈರೇಗೌಡ, ಶಾಸಕಿ ಸೌಮ್ಯ ರಾಮಲಿಂಗಾ ರೆಡ್ಡಿ, ಕಾರ್ಪೊರೇಟರ್‌ಗಳು ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇದನ್ನೂ ಓದಿ: ಪಶ್ಚಿಮಬಂಗಾಳದಲ್ಲಿ ಬಿಜೆಪಿ ಬೃಹತ್ ಸಮಾವೇಶ, ಶಾ ಸಮ್ಮುಖದಲ್ಲಿ ಸುವೇಂದು ಬಿಜೆಪಿಗೆ