Advertisement
ಜತೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ನೂರಾರು ಮರಗಳು ಬಲಿಯಾಗುತ್ತಿವೆ. ಹೀಗಾಗಿ ನಗರದಲ್ಲಿ ಹಸಿರು ವಾತಾವರಣ ಹೆಚ್ಚಿಸಲು ಪ್ರಸಕ್ತ ಸಾಲಿನಲ್ಲೇ ನಗರದ ವಿವಿಧೆಡೆ 10 ಲಕ್ಷ ಗಿಡಗಳನ್ನು ನೆಡುವುದಾಗಿ ಪಾಲಿಕೆ ಪಾಲಿಕೆಯ ಬಜೆಟ್‌ನಲ್ಲಿ ಘೋಷಿಸಿತ್ತು.
Related Articles
Advertisement
ಹತ್ತು ಸಾವಿರ ಮನವಿಯೂ ಇಲ್ಲ: ಒಂದು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಬೆಂಗಳೂರು ನಗರದಲ್ಲಿ ಸಸಿಗಳಿಗಾಗಿ ಬಿಬಿಎಂಪಿ ಆ್ಯಪ್ ಮೂಲಕ ಮನವಿ ಸಲ್ಲಿಸಿದವರ ಸಂಖ್ಯೆ 10 ಸಾವಿರ ಸಹ ಮೀರಿಲ್ಲ. ಗ್ರೀನ್ ಆ್ಯಪ್ ಆರಂಭವಾಗಿ ಐದು ತಿಂಗಳ ನಂತರ ಅ.31ಕ್ಕೆ ಸೇವೆ ಸ್ಥಗಿತಗೊಂಡಿದೆ.
ಈ ಅವಧಿಯಲ್ಲಿ ಸಸಿಗಳಿಗಾಗಿ ಪಾಲಿಕೆಗೆ 9,670 ಜನರು ಮಾತ್ರ ಮನವಿ ಸಲ್ಲಿಸಿ, ಒಟ್ಟು 2,68,873 ಸಸಿಗಳನ್ನು ಪಡೆದಿದ್ದಾರೆ. ಇನ್ನು ಬಿಬಿಎಂಪಿ ಪಾಲಿಕೆ ಸದಸ್ಯರು 90 ಸಾವಿರ ಸಸಿಗಳನ್ನು ಪಡೆದಿದ್ದು, ಪಾಲಿಕೆಯಿಂದ ನಗರದ ವಿವಿದೆಡೆ 1 ಲಕ್ಷ ಗಿಡಗಳನ್ನು ನೆಡಲಾಗಿದೆ. ಅದರಂತೆ ಒಟ್ಟು 4.58 ಲಕ್ಷ ಸಸಿಗಳು ಈವರೆಗೆ ವಿತರಿಸಲಾಗಿದ್ದು, ಇನ್ನು 5.42 ಲಕ್ಷ ಸಸಿಗಳು ಪಾಲಿಕೆಯ ನರ್ಸರಿಗಳಲ್ಲಿಯೇ ಉಳಿದಿವೆ.
ಗಿಡ ನೆಡಲು ಜಾಗವಿಲ್ಲ: ನಗರ ಸಂಪೂರ್ಣವಾಗಿ ಕಾಂಕ್ರಿಟ್ ಮಯವಾಗಿರುವುದರಿಂದ ಕೇಂದ್ರ ಭಾಗದ ಯಾವುದೇ ಪ್ರದೇಶದಲ್ಲೂ ಹೆಚ್ಚು ಸಸಿಗಳನ್ನು ನೆಡಲು ಸಾಧ್ಯವಾಗಿಲ್ಲ. ಉಳಿದಂತೆ ಹೊರ ವಲಯದ ಹಲವು ಭಾಗಗಳಲ್ಲಿ ಸಸಿಗಳನ್ನು ನೆಡಲಾಗಿದ್ದು, ಕೇಂದ್ರ ಭಾಗದಲ್ಲಿ ಜಾಗ ಲಭ್ಯವಿರುವ ಕಡೆ, ರಸ್ತೆ ವಿಭಜಕ ಹಾಗೂ ಪಾದಚಾರಿ ಮಾರ್ಗದ ಸಮೀಪದಲ್ಲಿ ಸಸಿಗಳನ್ನು ನೆಡಲಾಗಿದೆ.
ನರ್ಸರಿಗಳಲ್ಲೇ ಉಳಿದ 5 ಲಕ್ಷ ಸಸಿ: ಬಿಬಿಎಂಪಿ ವತಿಯಿಂದ ಗ್ರೀನ್ ಆ್ಯಪ್ ಅಭಿವೃದ್ಧಿಪಡಿಸಿದಾಗ ಪಾಲಿಕೆಯ ನರ್ಸರಿಗಳಲ್ಲಿ ಮೂರು ಹಾಗೂ ಐದು ಅಡಿಯ 10 ಲಕ್ಷ ಸಸಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಅದರಂತೆ ಕೆಂಪಾಪುರ ನರ್ಸರಿಯಲ್ಲಿ 3.5 ಲಕ್ಷ, ಯಲಹಂಕದ ಅಟ್ಟೂರಿನಲ್ಲಿ 2.5 ಲಕ್ಷ, ಸುಮ್ಮನಹಳ್ಳಿಯಲ್ಲಿ 45 ಸಾವಿರ,
ಜ್ಞಾನಭಾರತಿಯಲ್ಲಿ 1.8 ಲಕ್ಷ, ಕೂಡ್ಲು ಮತ್ತು ಹೆಸರುಘಟ್ಟ ನರ್ಸರಿಗಳಲ್ಲಿ ತಲಾ 2.25 ಲಕ್ಷ ಸಸಿಗಳು ಸೇರಿ 10.50 ಲಕ್ಷ ಸಸಿಗಳಿವೆ ಎಂದು ಹೇಳಲಾಗಿತ್ತು. ಆದರೆ, ಪಾಲಿಕೆಯ ಯಾವ ನರ್ಸರಿಯಿಂದ ಎಷ್ಟು ಸಸಿಗಳನ್ನು ವಿತರಿಸಲಾಗಿದೆ, ಮತ್ತು ಎಷ್ಟು ಸಸಿಗಳು ಉಳಿದಿವೆ ಎಂಬ ಕುರಿತು ಪಾಲಿಕೆಯ ಅಧಿಕಾರಿಗಳ ಬಳಿಯೇ ಮಾಹಿತಿಯಿಲ್ಲ.
ಪಾಲಿಕೆಯವರು ಸಸಿ ಕೊಡಲೇ ಇಲ್ಲ!: ಒಂದೆಡೆ ಸಾರ್ವಜನಿಕರಿಂದ ಸ್ಪಂದನೆ ಸಿಕ್ಕಿಲ್ಲ ಎಂಬ ಕಾರಣ ನೀಡಿ ಪಾಲಿಕೆ ಧಿಕಾರಿಗಳು ಬಿಬಿಎಂಪಿ ಗ್ರೀನ್ ಆ್ಯಪ್ ಸೇವೆ ಸ್ಥಗಿತಗೊಳಿಸಿದ್ದಾರೆ. ಆದರೆ ಆ್ಯಪ್ ಸ್ಟೋರ್‌ನಲ್ಲಿ “ಬಿಬಿಎಂಪಿ ಗ್ರೀನ್’ಗೆ ಬಂದಿರುವ ಕಮೆಂಟ್‌ಗಳು ಬೇರೆಯದೇ ಕತೆ ಹೇಳುತ್ತಿವೆ.
ಆ್ಯಪ್‌ಗೆ 4 ಸ್ಟಾರ್ ಸಿಕ್ಕಿದೆ. ಆ್ಯಪ್ ಡೌನ್‌ಲೋಡ್ ಮಾಡಿಕೊಂಡ 229 ಮಂದಿ ಪೈಕಿ 140 ಬಳಕೆದಾರರು 5 ಸ್ಟಾರ್ ರೇಟಿಂಗ್ ನೀಡಿದರೆ, 40 ಮಂದಿ ಕೇವಲ ಒಂದು ಸ್ಟಾರ್ ರೇಟಿಂಗ್ ಕೊಟ್ಟಿದ್ದಾರೆ. ಉಳಿದವರು 2, 3 ರೇಟಿಂಗ್ ನೀಡಿದ್ದಾರೆ. ಇನ್ನು 40 ಬಳಕೆದಾರರು ಕಮೆಂಟ್ ಮಾಡಿದ್ದು, ಶೇ.80ರಷ್ಟು ಮಂದಿ “ಇದೊಂದು ಕೆಟ್ಟ ಆ್ಯಪ್’, “ಸಮಯ ವ್ಯರ್ಥ’,
ಕೆಲಸವಿಲ್ಲದವರು ಗಿಡಕ್ಕೆ ಆರ್ಡರ್ ಮಾಡಬೇಕು’, “ಮನವಿ ಸಲ್ಲಿಸಿ ಎರಡು ತಿಂಗಳಾದರೂ ಸಸಿ ಕೊಟ್ಟೇ ಇಲ್ಲ’, “ನಿಗದಿತ ಸ್ಥಳಕ್ಕೆ ಹೋಗಿ ಕಾದು ಕಾದು ಸಾಕಾಯಿತು,’ ಎಂದೆಲ್ಲಾ ಆರೋಪಿಸಿದ್ದಾರೆ. ಬಹುತೇಕರು ತಮಗೆ “ಪಾಲಿಕೆಯಿಂದ ಸಸಿಯನ್ನೇ ನೀಡಿಲ್ಲ’ ಎಂದು ಹೇಳಿದ್ದರೆ, “ಮನವಿ ಸಲ್ಲಿಸಿದರೆ ಆ ಕಡೆಯಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ’ ಎಂದು ಹಲವರು ಬರೆದಿದ್ದಾರೆ.
“ಗರಿಷ್ಠ 750 ಸಸಿಗಳನ್ನು ಪಡೆಯಬಹುದು ಎಂದು ತಿಳಿಸಿದ್ದರಿಂದ ಹತ್ತು ಬಗೆಯ 750 ಸಸಿಗಳಿಗೆ ಮನವಿ ಸಲ್ಲಿಸಿದ್ದೆ. ಆದರೆ ಪಾಲಿಕೆಯವರು ನನಗೆ ಕೊಟ್ಟಿದ್ದು ಒಂದೇ ಬಗೆಯ ಹತ್ತು ಸಸಿಗಳನ್ನು ಮಾತ್ರ,’ ಎಂದು ಬ್ರಿಗಿಟ್ಟೆ ಜಚಾರಿಯಾ ಎಂಬುವವರು ದೂರಿದ್ದಾರೆ. ಪ್ಲೇಸ್ಟೋರ್‌ನಲ್ಲಿ 4 ಸ್ಟಾರ್ ರೇಟಿಂಗ್ ಇದ್ದರೂ, ಕಮೆಂಟ್‌ಗಳಲ್ಲಿ ನಕಾರಾತ್ಮಕ ಅನಿಸಿಕೆಗಳೇ ಹೆಚ್ಚಿವೆ. ಹೀಗಾಗಿ ಯೋಜನೆ ಸ್ಥಗಿತಗೊಳ್ಳಲು ಅಸಲಿ ಕಾರಣವೇನು ಎಂದು ಅಧಿಕಾರಿಗಳೇ ಹೇಳಬೇಕಿದೆ.
ಆ್ಯಪ್ ವೈಫಲ್ಯಕ್ಕೆ ಕಾರಣವೇನು?: ಆ್ಯಪ್ ಮೂಲಕ ಗಿಡಗಳನ್ನು ಕೋರಿದರೂ ಪಾಲಿಕೆಯ ಅಧಿಕಾರಿಗಳು ಸಮರ್ಪಕವಾಗಿ ನಾಗರಿಕರಿಗೆ ತಲುಪಿಸುವ ವ್ಯವಸ್ಥೆ ಮಾಡಿಲ್ಲ. ಇದರೊಂದಿಗೆ ಸಸಿಗಳಿಗಾಗಿ ಮನವಿ ಮಾಡಿದ ನಂತರ ಗಿಡಗಳನ್ನು ಪಡೆಯಲು ಉದ್ಯಾನಗಳ ಬಳಿಗೆ ಹೋದರೂ ಸಸಿ ವಿತರಿಸುತ್ತಿರಲಿಲ್ಲ.
ಯಾವ ಸಮಯದಲ್ಲಿ ಸಸಿಗಳನ್ನು ವಿತರಿಸಲಾಗುತ್ತದೆ ಎಂಬ ಮಾಹಿತಿ ನೀಡದ ಕಾರಣ ಸಾರ್ವಜನಿಕರು ಉದ್ಯಾನಗಳ ಬಳಿಗೆ ಹೋಗಿ, ಕಾದು ವಾಪಸ್ ಬಂದಿದ್ದಾರೆ. “ಇಲ್ಲಿ ಸಸಿ ಸಿಗುತ್ತದೆ’ ಎಂದು ಹಲವು ವಾರ್ಡ್‌ಗಳ ಉದ್ಯಾನಗಳ ಹೆಸರು ಹಾಕಿದ್ದರೂ, ಬಹುತೇಕ ಉದ್ಯಾನಗಳಿಗೆ ಸಸಿಗಳೇ ಬಂದಿಲ್ಲ. ಈ ಎಲ್ಲ ಕಾರಣಗಳಿಂದಾಗಿ ನಾಗರಿಕರು ಸಸಿಗಳನ್ನು ಪಡೆಯಲು ಮುಂದಾಗಿಲ್ಲ ಎನ್ನಲಾಗಿದೆ.
ಮಳೆಗಾಲ ಮುಗಿದಿರುವುದರಿಂದ ಹಾಗೂ ಸಸಿಗಳನ್ನು ನೆಡಲು ಸೂಕ್ತ ವಾತಾವರಣ ಇಲ್ಲದಿರುವ ಕಾರಣ ಸಾರ್ವಜನಿಕರಿಂದ ಸಸಿಗಳಿಗೆ ಮನವಿ ಬರುತ್ತಿಲ್ಲ. ಈ ಕಾರಣದಿಂದ ಪಾಲಿಕೆಯ ಮಾಹಿತಿ ತಂತ್ರಜ್ಞಾನ ವಿಭಾಗದ ಅಧಿಕಾರಿಗಳು ಗ್ರೀನ್‌ಆ್ಯಪ್ ಸ್ಥಗಿತಗೊಳಿಸಿದ್ದಾರೆ. ನರ್ಸರಿಗಳಲ್ಲಿರುವ ಸಸಿಗಳನ್ನು ಮುಂದಿನ ವರ್ಷ ನೆಡಲಾಗುವುದು.-ಅಪ್ಪುರಾವ್, ಬಿಬಿಎಂಪಿ ಅರಣ್ಯ ವಿಭಾಗದ ಡಿಸಿಎಫ್ * ವೆಂ.ಸುನೀಲ್‌ಕುಮಾರ್