ಬೆಂಗಳೂರು: ಬಿಬಿಎಂಪಿ ಸಾಮಾನ್ಯಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಹಾಗೂ ಹಿರಿಯ ವಿಜ್ಞಾನಿ ಯು.ಆರ್. ರಾವ್ ಅವರಿಗೆ ಸಂತಾಪ ಸೂಚಿಸಿ ಅವರ ಗೌರವಾರ್ಥ ಸೋಮವಾರಕ್ಕೆ ಸಭೆ ಮುಂದೂಡಲಾಯಿತು.
ಪೌರಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಸಭೆ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ನಾಯಕ ಮಹಮ್ಮದ್ ರಿಜ್ವಾನ್ ನವಾಬ್ ಸಂತಾಪ ಸೂಚನೆ ಮಂಡಿಸಿದರು. ಸೂಚನೆ ಮೇರೆಗೆ ಮೇಯರ್ ಜಿ. ಪದ್ಮಾವತಿ ಸೇರಿದಂತೆ ಎಲ್ಲ ಸದಸ್ಯರು ಅಗಲಿದ ಗಣ್ಯರಿಬ್ಬರಿಗೂ ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಜೆಡಿಎಸ್ ನಾಯಕಿ ರಮಿಳಾ ಉಮಾಶಂಕರ್, ಮಾಜಿ ಮೇಯರ್‌ಗಳಾದ ಬಿ.ಎಸ್. ಸತ್ಯನಾರಾಯಣ, ಮಂಜುನಾಥರೆಡ್ಡಿ, ಸದಸ್ಯರಾದ ಆರ್.ಎಸ್. ಸತ್ಯನಾರಾಯಣ, ಎಂ.ಕೆ. ಗುಣಶೇಖರ್, ಡಾ.ಎಸ್.ರಾಜು, ಉಮೇಶ್ ಶೆಟ್ಟಿ, ಸಂಪತ್‌ರಾಜ್, ಮೋಹನ್ ಕುಮಾರ್, ನಾಗರಾಜ್, ಪಾರ್ಥಿಬನ್, ಲಲಿತಾ ತಿಮ್ಮನಂಜಯ್ಯ, ಸಂಪತ್‌ಕುಮಾರ್, ಕೋಕಿಲಾ ಚಂದ್ರಶೇಖರ್, ನರಸಿಂಹ ನಾಯಕ್ ಅವರುಗಳ ಧರಂಸಿಂಗ್ ಹಾಗೂ ಯು.ಆರ್. ರಾವ್ ಅವರ ಸೇವೆಯನ್ನು ಸ್ಮರಿಸಿದರು.
ರಾಜ್ಯದ ಸಮಗ್ರ ಅಭಿವೃದ್ಧಿಯ ಕನಸನ್ನು ಕಂಡು ವಿವಿಧ ಇಲಾಖೆಗಳ ಸಚಿವರಾಗಿದ್ದ ಸಂದರ್ಭದಲ್ಲಿ ಹಲವಾರು ಯೋಜನೆಗಳಿಗೆ ಸಾಕಾರ ರೂಪ ಕೊಟ್ಟಿರುವ ಅವರ ಹೆಸರನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಬೆಂಗಳೂರಿನ ಯಾವುದಾದರೂ ರಸ್ತೆ, ವೃತ್ತ ಅಥವಾ ಪ್ರಮುಖ ಸ್ಥಳವೊಂದಕ್ಕೆ ಧರಂಸಿಂಗ್ ಅವರ ಹೆಸರನ್ನು ನಾಮಕರಣ ಮಾಡುವುದು ಸೂಕ್ತ ಎಂದು ಕೆಲವು ಸದಸ್ಯರು ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಎಲ್ಲ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಪ್ರೀತಿಯಿಂದ ಮಾತನಾಡಿಸುವ ಮೂಲಕ ಜನಾನುರಾಗಿಯಾಗಿದ್ದ ಧರಂಸಿಂಗ್ ಎಲ್ಲ ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಮುಖ್ಯಮಂತ್ರಿಗಳಾಗಿ ನಾಡಿನ ಅಭಿವೃದ್ಧಿಗಾಗಿ ಶ್ರಮಿಸಿದವರು. ಯುವ ಜನಾಂಗ ರಾಜಕೀಯಕ್ಕೆ ಬಂದು ಜನಪರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಯುವ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಿದ್ದರು. ತಾಳ್ಮೆಗೆ ಮತ್ತೂಂದು ಹೆಸರೇ ಧರಂಸಿಂಗ್. ಜನಾನುರಾಗಿಯಾಗಿದ್ದ ಅವರು ಮುಖ್ಯಮಂತ್ರಿಯಾಗಿದ್ದರೂ ಎಂದಿಗೂ ದರ್ಪ ತೋರಿಸಲಿಲ್ಲ. ಅವರೊಬ್ಬ ಧೀಮಂತ ರಾಜಕಾರಣಿ ಎಂದು ಬಣ್ಣಿಸಿದರು.
ಇಸ್ರೋ ಮಾಜಿ ಅಧ್ಯಕ್ಷ ಡಾ. ಯು.ಆರ್. ರಾವ್ ಅವರ ನಿಧನಕ್ಕೂ ಸಂತಾಪ ಸೂಚಿಸಿದ ಪಾಲಿಕೆ ಸದಸ್ಯರು ದೇಶದ ಬಾಹ್ಯಾಕಾಶ ಸಂಸ್ಥೆ ವಿದೇಶಕ್ಕೂ ಪೈಪೋಟಿ ನೀಡಬಲ್ಲದು, ಸ್ವಾವಲಂಬಿಯಾಗಿ ತನ್ನ ಉಪಗ್ರಹಗಳನ್ನು ಇಲ್ಲಿಂದಲೇ ಉಡಾವಣೆ ಮಾಡಬಲ್ಲದು ಎಂಬುದನ್ನು ಸಾಬೀತು ಮಾಡಿದ ಕೀರ್ತಿ ಯು.ಆರ್. ರಾವ್ ಅವರಿಗೆ ಸಲ್ಲುತ್ತದೆ. ಅವರ ಸೇವೆ ಅನನ್ಯವಾದುದು ಎಂದು ಸದಸ್ಯರು ಬಣ್ಣಿಸಿದರು. ನಂತರ ಸಭೆ ಮುಂದೂಡಲಾಯಿತು.