ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತನಿಖೆಗೆ ಪಾಲಿಕೆ ಅಧಿಕಾರಿಗಳು ಕೂಡ ಸೂಕ್ತ ಸಹಕಾರ ನೀಡುತ್ತಿದ್ದಾರೆ. ತನಿಖಾ ವರದಿಯನ್ನು ಮುಖ್ಯಮಂತ್ರಿಗಳಿಗೆ ಮತ್ತು ಉಪ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುತ್ತೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು.
Advertisement
ಪ್ರಯೋಗಾಲದಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಇನ್ನಷ್ಟು ಮುಂಜಾಗ್ರತ ಕ್ರಮ ಕೈಗೊಳ್ಳಲು ವಿಚಾರ ನಡೆಸಲಾಗುತ್ತಿದೆ. ಸುಟ್ಟಗಾಯಗಳಾಗಿರುವ ಬಿಬಿಎಂಪಿ ಚೀಫ್ ಎಂಜಿನಿಯರ್ ಸಹಿತ ಪಾಲಿಕೆಯ 9 ಸಿಬ್ಬಂದಿ ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗ್ನಿ ಅವಘಡದಲ್ಲಿ 9ರಲ್ಲಿ 6 ಜನರಿಗೆ ಯಾವುದೇ ರೀತಿಯ ಅಪಾಯವಿಲ್ಲ. ಇನ್ನುಳಿದ ಮೂವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಬಿಬಿಎಂಪಿಯಿಂದಲೇ ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ಮುಖ ಸುಟ್ಟವರಿಗೆ ಸರ್ಜರಿ ಮಾಡಿಸಲಾಗುವುದು ಎಂದು ಹೇಳಿದರು.
ಪಾಲಿಕೆಯ ಗುಣನಿಯಂತ್ರಣ ಘಟಕದಲ್ಲಿ ನಡೆದ ಅಗ್ನಿ ಅನಾಹುತಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಠಾಣೆ ಪೊಲೀಸರು ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಗುಣನಿಯಂತ್ರಣ ಘಟಕದಲ್ಲಿ ಏನೆಲ್ಲ ಪರೀಕ್ಷೆ ನಡೆಸಲಾಗುತ್ತದೆ. ಅಲ್ಲಿ ಮುನ್ನೆಚ್ಚರಿಕಾ ಕ್ರಮಗಳು ಏನೇಲ್ಲ ಇರಬೇಕಿತ್ತು? ಏನಿವೆ? ಯಾವ ಹಂತದ ಅಧಿಕಾರಿಗಳು ಗುಣಮಟ್ಟ ಪರೀಕ್ಷೆ ನಡೆಸಲಿದ್ದಾರೆ? ಅವರ ವಿದ್ಯಾರ್ಹತೆ ಏನು? ತಂತ್ರಜ್ಞಾನರೇ? ರಾಸಾಯನಿಕ ತಜ್ಞರೇ? ಯಾವೆಲ್ಲ ವಸ್ತುಗಳು ಅಥವಾ ಕಾಮಗಾರಿಗಳ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ ಎಂಬ ಸಮಗ್ರ ಮಾಹಿತಿ ಹಾಗೂ ದಾಖಲೆಗಳನ್ನು ನೀಡುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಅಸಲಿಗೆ ಈ ಗುಣನಿಯಂತ್ರಣ ಪ್ರಯೋಗಾಲಯದ ರೀತಿ ಇರಲಿಲ್ಲ. ಒಂದು ರೀತಿ ಗೋಡೌನ್ ಹಾಗೆ ಇತ್ತು. ಪ್ರಯೋಗಾಲಯ ನಿರ್ಮಾಣವಾಗಬೇಕಾದರೇ ಕನಿಷ್ಠ ಒಳ್ಳೆಯ ಗಾಳಿ, ಬೆಳಕು ಇರಬೇಕು. ಆದರೆ, ಇಲ್ಲಿ ಅಂತಹ ವಾತಾವರಣ ಇರಲೇ ಇಲ್ಲ. ಜೊತೆಗೆ ಲ್ಯಾಬ್‌ನಲ್ಲಿ ಪ್ರಯೋಗ ನಡೆಯುತ್ತಿರುವಾಗಲೇ ಅಧಿಕಾರಿಗಳು ಸಭೆ ನಡೆಸುತ್ತಿದ್ದರು. ಇಲ್ಲಿ ಸಭೆ ನಡೆಸಲು ಅನುಮತಿ ಕೊಟ್ಟವರಾರು ಎಂಬ ಪ್ರಶ್ನೆ ಸಹ ಹುಟ್ಟಿಕೊಂಡಿದೆ.
Related Articles
Advertisement
6 ಮಂದಿ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಅವಘಡದಲ್ಲಿ ಗಾಯಗೊಂಡಿದ್ದ 9 ಮಂದಿ ಪೈಕಿ 6 ಮಂದಿ ಚೇರಿಸಿಕೊಳ್ಳುತ್ತಿದ್ದಾರೆ. ಆದರೆ, ಮೂವರು ಸ್ಥಿತಿ ಗಂಭೀರವಾಗಿದೆ. ಅಪಘಾತ ಮತ್ತು ತುರ್ತು ಚಿಕಿತ್ಸಾ ಕೇಂದ್ರ ವಿಭಾಗದಲ್ಲಿ ಮೂವರ ಮೇಲೆ ನಿಗಾ ಇಟ್ಟಿರುವ ವೈದ್ಯರು ಭಾನುವಾರವೂ ಇನ್ನಷ್ಟು ಚಿಕಿತ್ಸೆ ಮುಂದುವರಿಸಿದ್ದಾರೆ. ಕಾರ್ಯಪಾಲಕ ಅಭಿಯಂತರ ಸಂತೋಷ್ ಕುಮಾರ್, ವಿಜಯಮಾಲ, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಧರ್, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಶ್ರೀನಿವಾಸ್, ಗಣಕಯಂತ್ರ ನಿರ್ವಾಹಕ ಮನೋಜ್, ಪ್ರಥಮ ದರ್ಜೆ ಸಹಾಯಕ ಸಿರಾಜ್ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಆದರೆ, ಸುಟ್ಟಗಾಯದಿಂದ ಬೆಂದಿರುವ ಕಾರ್ಯಪಾಲಕ ಅಭಿಯಂತರ ಕಿರಣ್ ಡಯಾಲಿಸಿಸ್‌ನಿಂದ ಬಳಲುತ್ತಿದ್ದು, ಭಾನುವಾರ ಮತ್ತೆ ಡಯಾಲಿಸಿಸ್‌ಗೆ ಒಳಗಾದರು. 3ನೇ ಬಾರಿಗೆ ಡಯಾಲಿಸಿಸ್‌ಗೆ ಒಳಗಾಗಿದ್ದು ಕಿರಣ್ ಸ್ಥಿತಿ ಗಂಭೀರವಾಗಿದೆ. ನೆಪ್ರಾಲಜಿ ತಜ್ಞರು ಕಿರಣ್ ಅವರ ಆರೋಗ್ಯದ ಮೇಲೆ ನಿಗಾವಹಿಸಿದ್ದಾರೆ. ಡಿಟಿಪಿ ಆಪೇಟರ್ ಜ್ಯೋತಿ ಮುಖಕ್ಕೆ ತೀವ್ರ ತರಹ ಸುಟ್ಟಗಾಯಗಳಾಗಿದ್ದು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ತೀವ್ರ ನಿಗಾಘಟಕದಲ್ಲೆ ವಿಶೇಷ ವೈದ್ಯರ ತಂಡ ಆರೈಕೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮುಖ್ಯ ಅಭಿಯಂತರ ಶಿವಕುಮಾರ್, ಕಾರ್ಯಪಾಲಕ ಅಭಿಯಂತರ ಕಿರಣ್, ಆಪರೇಟರ್ ಜ್ಯೋತಿ ಅವರ ಆರೋಗ್ಯವು ತುಸು ಗಂಭೀರವಾಗಿದೆ. ಇನ್ನಷ್ಟು ಹೆಚ್ಚಿನ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.