Advertisement

ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಮತ್ತೆ ಪಾಲಿಕೆ ಫೇಲ್‌?

05:46 AM May 28, 2020 | Lakshmi GovindaRaj |

ಬೆಂಗಳೂರು: ಕೇಂದ್ರ ಸರ್ಕಾರ ಪ್ರತಿ ವರ್ಷವೂ ಎಲ್ಲ ನಗರಗಳ ಕಸ ನಿರ್ವಹಣೆ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿ ನೀಡುವ ರ್‍ಯಾಂಕಿಂಗ್‌ ಪಟ್ಟಿ (ಸ್ವಚ್ಛ ಸರ್ವೇಕ್ಷಣ್‌ನಲ್ಲಿ) ಈ ಬಾರಿಯೂ ಪಾಲಿಕೆ ಹಿನ್ನಡೆ ಬಹುತೇಕ ಖಚಿತವಾಗಿದೆ. ಬೆಂಗಳೂರು 2019ನೇ ಸಾಲಿನಲ್ಲಿ ಸ್ವಚ್ಛ ಸರ್ವೇಕ್ಷಣ್‌ನಲ್ಲಿ 194ನೇ ರ್‍ಯಾಂಕಿಂಗ್‌ಗೆ ತೃಪ್ತಿ ಪಟ್ಟಿಕೊಂಡಿತ್ತು.

Advertisement

ಕಳೆದ ಒಂದು ವರ್ಷಗಳಲ್ಲಿ ಕಸ ನಿರ್ವಹಣೆ. ವಿಲೇವಾರಿ ಹಾಗೂ ಸ್ವಚ್ಛತೆಯ ವಿಚಾರಗಳಲ್ಲಿ ಯಾವುದೇ ಬದಲಾವಣೆಯಾಗದ ಹಿನ್ನೆಲೆಯಲ್ಲಿ ಈ ಬಾರಿಯೂ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಕಡಿಮೆ ರ್‍ಯಾಂಕಿಂಗ್‌ ಬರುವ ಸಾಧ್ಯತೆ ಇದೆ ಎಂದು ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರ್‍ಯಾಂಕಿಂಗ್‌ ಪಟ್ಟಿ ಬಹುತೇಕ ಅಂತಿಮವಾಗಿದ್ದು, ಕೊರೊನಾ ತುರ್ತು ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಪ್ರಶಸ್ತಿ  ಪ್ರದಾನ ಮಾಡುವುದು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ರ್‍ಯಾಂಕಿಂಗ್‌ ಪ್ರಕಟ ಮಾಡುವುದನ್ನು ತಡೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ.

ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ  ರ್‍ಯಾಂಕಿಂಗ್‌ ಗಳಿಸಬೇಕಾದರೆ ಹಸಿ ಮತ್ತು ಒಣಕಸ ನಿರ್ವಹಣೆಯಲ್ಲಿ ಉತ್ತಮ ವ್ಯವಸ್ಥೆ ಮಾಡಿಕೊಂಡಿರಬೇಕು. ಭೂಭರ್ತಿ ಕೇಂದ್ರಗಳಿಗೆ ಅತೀ ಕಡಿಮೆ ಪ್ರಮಾಣದಲ್ಲಿ ಮಿಶ್ರಕಸ ಹೋಗಬೇಕು. ಪಾಲಿಕೆ ಈ ಎರಡೂ ವಿಚಾರಗಳಲ್ಲೂ ಎಡವಿದೆ. ನಗರದಲ್ಲಿ ಸದ್ಯ ಶೇ.20ರಿಂದ 30ರಷ್ಟು ಮಾತ್ರದಲ್ಲಿ  ಮಾತ್ರ ಕಸ ವಿಂಗಡಣೆಯಾಗುತ್ತಿದೆ.

ಅಷ್ಟೇ ಅಲ್ಲ, ಹಸಿಕಸ ಸಂಸ್ಕರಣೆಗಿಂತ ಹೆಚ್ಚಾಗಿ ಭೂಭರ್ತಿಗೆ ಕಸ ಹೆಚ್ಚು ಹೋಗುತ್ತಿದೆ. ಹೀಗಾಗಿ, ಈ ಅಂಶಗಳು ಸ್ವಚ್ಛ  ಸರ್ವೇಕ್ಷಣ್‌ನಲ್ಲಿ ಪಾಲಿಕೆ ರ್‍ಯಾಂಕಿಂಗ್‌ ಕುಸಿಯಲು ಕಾರಣವಾಗಲಿದೆ. ನಗರದಲ್ಲಿ ಹಸಿಕಸ ಹಾಗೂ ಒಣಕಸ ಪ್ರತ್ಯೇಕವಾಗಿ ಸಂಗ್ರಹ ಮಾಡುವ ಸಂಬಂಧ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮಿಶ್ರ ಆಡಳಿತದ ಅವಧಿಯಲ್ಲಿ ಟೆಂಡರ್‌  ರೆಯಲಾಗಿತ್ತು. ಇದು  ಬಹುತೇಕ ಅಂತಿಮವಾಗಿ ನಗರದಲ್ಲಿ ಕಸದ ಸಮಸ್ಯೆಗೆ ಪರಿಹಾರ ಸಿಕ್ಕು, ಕಸ ನಿರ್ವಹಣೆಯಲ್ಲಿ ಪಾಲಿಕೆ ಮಾದರಿಯಾಗಲಿದೆ ಎಂದೇ ಆಶಯಿಸಲಾಗಿತ್ತು.

ಆದರೆ, ಮೊದಲಿನಿಂದಲೂ ಈ ಟೆಂಡರ್‌ಗೆ ವಿರೋಧ  ವ್ಯಕ್ತಪಡಿಸುತ್ತಿದ್ದ ಬಿಜೆಪಿ ಆಡಳಿತಕ್ಕೆ ಬರುತ್ತಿದ್ದಂತೆಯೇ ಇಂದೋರ್‌ ಮಾದರಿಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಿತು. ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಸದ್ಯ ಇಂದೋರ್‌ ಮಾದರಿಯನ್ನು ನಿಲ್ಲಿಸಲಾಗಿದೆ. ಹೀಗಾಗಿ, ಪಾಲಿಕೆ ವ್ಯಾಪ್ತಿಯಲ್ಲಿ ಹಳೆ ಮಾದರಿಯೇ ಮುಂದುವರಿದಿದೆ.

Advertisement

ಸ್ವಚ್ಛ ಸರ್ವೇಕ್ಷಣ್‌ ಮಾನದಂಡಗಳು
1. ಹಸಿ ಮತ್ತು ಒಣಕಸ ನಿರ್ವಹಣೆ ಜತೆಗೆ ಕಸ ಸಂಸ್ಕರಣೆ ಪ್ರಮಾಣ ಹೆಚ್ಚಿರಬೇಕು. ಅತೀ ಕಡಿಮೆ ಮೊತ್ತದ ಕಸ ಭೂಭರ್ತಿ ಕೇಂದ್ರಗಳಿಗೆ ಹೋಗಬೇಕು. ಪಾಲಿಕೆಯಲ್ಲಿ ಇದು ತದ್ವಿರುದ್ಧವಾಗಿದೆ.

2. ನಗರದ ವಾಣಿಜ್ಯ ಪ್ರದೇಶಗಳಲ್ಲಿ ದಿನಕ್ಕೆ ಎರಡು ಬಾರಿ ಸ್ವಚ್ಛತೆ ಮಾಡಬೇಕು. ಆದರೆ, ನಗರದಲ್ಲಿ ಮೆಜೆಸ್ಟಿಕ್‌ ಹಾಗೂ ಕೃಷ್ಣರಾಜೇಂದ್ರ ಮಾರುಕಟ್ಟೆ ಹೊರತುಪಡಿಸಿ, ಬಹುತೇಕ ಕಡೆಗಳಲ್ಲಿ ಸ್ವಚ್ಛತೆ ಕಾಪಾಡಿಲ್ಲ. ಕಾಂಪ್ಯಾಕ್ಟರ್‌ಗಳಿಗೆ  ಜಿಪಿಎಸ್‌ ಇರಬೇಕು ಈ ಕೆಲಸವನ್ನು ಪಾಲಿಕೆ ವಾಹನಗಳಿಗೆ ಮಾಡಿಸಿಲ್ಲ.

3. ಮುಖ್ಯವಾಗಿ ನಗರದ ಜನ ಸಾಂದ್ರತೆಗೆ ಅನುಗುಣವಾಗಿ ಸಮುದಾಯ, ಸಾರ್ವಜನಿಕ ಶೌಚಾಲಯಗಳು ಇರಬೇಕು.

4. ಸ್ವಚ್ಛ ಸರ್ವೇಕ್ಷಣ್‌ ಅಭಿಯಾನದಲ್ಲಿ ಜನಾಭಿಪ್ರಾಯಕ್ಕೆ ಮಾನ್ಯತೆ ಹೆಚ್ಚು. ಬೆಂಗಳೂರಿನಲ್ಲಿ 50 ಸಾವಿರ ಜನ ಮಾತ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರೊಂದಿಗೆ ನಗರ ಬ್ಲಾಕ್‌ ಸ್ಪಾಟ್‌ಗಳ ಸಂಖ್ಯೆಯೂ ಇಳಿಕೆಯಾಗಿಲ್ಲ.

5. ಕಸ ನಿರ್ವಹಣೆಯಲ್ಲಿ ನಿಯಮ ಉಲ್ಲಂ ಸುವವರ ವಿರುದ್ಧ ದಂಡ ಪ್ರಯೋಗದಿಂದ ಈ ವರ್ಷ ಪಾಲಿಕೆಗೆ ತುಸು ಅಂಕ ಸಿಗಬಹುದು. ಈ ಎಲ್ಲ ಕಾರಣಗಳಿಂದ ಪಾಲಿಕೆ ರ್‍ಯಾಂಕಿಂಗ್‌ನಲ್ಲಿ ಹಿಂದುಳಿಯಲಿದೆ 200ರ ಗಡಿದಾಟಿ ರ್‍ಯಾಂಕಿಂಗ್‌  ಬಂದರೂ ಅಚ್ಚರಿ ಇಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next