Advertisement
198 ವಾರ್ಡ್‌ಗಳ ಮರುವಿಂಗಡಣೆ ಅಧಿಸೂಚನೆಯೂ ಹೊರಬಿದ್ದು ಮತದಾರರ ಪಟ್ಟಿ ಸಿದ್ಧಗೊಳ್ಳುತ್ತಿರುವ ಬೆನ್ನಲ್ಲೇ ವಾರ್ಡ್‌ಗಳ ಸಂಖ್ಯೆ 225ಕ್ಕೆ ಹಾಗೂ ವಲಯಗಳ ಸಂಖ್ಯೆ 15ಕ್ಕೆ ಏರಿಸಿ ಪ್ರತಿ ವಲಯಕ್ಕೆ ಒಬ್ಬ ಆಯುಕ್ತರನ್ನು ನೇಮಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಸದ್ಯಕ್ಕೆ ಬಿಬಿಎಂಪಿ ಚುನಾವಣೆ ನಡೆಯುವುದು ಅನುಮಾನವಾಗಿದೆ.
Related Articles
Advertisement
ಬಿಡಿಎ, ಬೆಸ್ಕಾಂ, ಜಲಮಂಡಳಿ ಸೇರ್ಪಡೆ ಮಾಡುವುದು. ಮೇಯರ್ ಅಧಿಕಾರವಧಿ ಎಷ್ಟು ಇರಬೇಕು ಎಂಬುದು, ವಾರ್ಡ್‌ಗಳ ಸಂಖ್ಯೆ ಹೆಚ್ಚಳ ಈ ಎಲ್ಲಾ ವಿಚಾರಗಳು ಚರ್ಚೆ ಮಾಡಿ ಸಲಹೆ-ಸೂಚನೆ ಪಡೆದು ಬಿಬಿಎಂಪಿ ಕಾಯ್ದೆ ಆದಷ್ಟು ಶೀಘ್ರ ರಚಿಸಿ ವಿಧಾನ ಮಂಡಲದಲ್ಲಿ ಮಂಡನೆ ಮಾಡಲಾಗುವುದು. – ಎಸ್.ರಘು, ಬಿಬಿಎಂಪಿ ಕಾಯ್ದೆ ರಚನೆ ಜಂಟಿ ಸಲಹಾ ಸಮಿತಿ ಅಧ್ಯಕ್ಷ
ಬಿಬಿಎಂಪಿ ಚುನಾವಣೆ ಮುಂದೂಡಲು ಏನೆಲ್ಲಾ ಮಾಡಬೇಕೋ ಅದನ್ನು ರಾಜ್ಯ ಸರ್ಕಾರ ಮತ್ತು ಬಿಜೆಪಿ ಮಾಡುತ್ತಿದೆ. ಚುನಾವಣೆ ಹೊಸ್ತಿಲಲ್ಲಿ ಬಿಬಿಎಂಪಿ ಕಾಯ್ದೆ ರಚನೆಯ ಅಗತ್ಯ ಹಾಗೂ ಅದರ ಹಿಂದಿನ ಪ್ರಕ್ರಿಯೆಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ. ಪಾಲಿಕೆಯಲ್ಲೂ ಚರ್ಚೆ ಆಗಿಲ್ಲ. – ಪಿ.ಆರ್.ರಮೇಶ್, ವಿಧಾನಪರಿಷತ್ ಸದಸ್ಯ
ರಾಜ್ಯ ಸಂಪುಟ ಸಭೆಯಲ್ಲಿ ಚರ್ಚೆ : ಬೆಂಗಳೂರು: ಬಿಬಿಎಂಪಿ ವಾರ್ಡ್ ಗಳ ಸಂಖ್ಯೆ ಹೆಚ್ಚಳ ಕುರಿತು ರಾಜ್ಯ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, 198 ವಾರ್ಡ್ ಗಳ ಸಂಖ್ಯೆ 225 ಕ್ಕೆ ಹೆಚ್ಚಿಸುವುದು, ವಲಯಗಳ ಸಂಖ್ಯೆ 15 ಕ್ಕೆ ಹೆಚ್ಚಳ ಸೇರಿ ಹಲವು ವಿಷಯಗಳ ಬಗ್ಗೆ ಸಂಪುಟದಲ್ಲಿ ಚರ್ಚಿಸಲಾಯಿತು ಎಂದು ಹೇಳಿದರು.
ಬಿಬಿಎಂಪಿ ಕಾಯ್ದೆ ರಚನೆ ಕುರಿತ ಜಂಟಿ ಸಲಹಾ ಸಮಿತಿ ಸಭೆ ಶುಕ್ರವಾರ ನಡೆಯಲಿದ್ದು ಅಲ್ಲಿ ಎಲ್ಲದರ ಬಗ್ಗೆ ಚರ್ಚಿಸಿ ನಂತರ ತೀರ್ಮಾನಿಸಲಾಗುವುದು. ಒಂದೊಮ್ಮೆ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಬೇಕಾದರೆ ಚುನಾವಣೆ ಮುಂದೂಡಬೇಕಾಗುತ್ತದೆ. ನ್ಯಾಯಾಲಯದ ಮುಂದೆ ಹೋಗಿ ಸರ್ಕಾರವೇ ಕಾಲಾವಕಾಶ ಕೋರಲಿದೆ ಅದೆಲ್ಲವೂ ಸಮಿತಿಯ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಹೇಳಿದರು.
ಬಿಬಿಎಂಪಿ ಕಾಯ್ದೆ ಸಮಗ್ರ ತಿದ್ದುಪಡಿಗೆ ಕೈ ಬೆಂಬಲ : ಬೆಂಗಳೂರು: ರಾಜ್ಯ ಸರ್ಕಾರ ಬಿಬಿಎಂಪಿ ಕಾಯ್ದೆಯನ್ನು ಕಾಟಾಚಾರಕ್ಕೆ ತಿದ್ದುಪಡಿ ಮಾಡದೆ ಸಮಗ್ರ ತಿದ್ದುಪಡಿ ಮಾಡಲು ಎಲ್ಲ ರೀತಿಯ ಸಹಕರಿಸಲು ಕಾಂಗ್ರೆಸ್ ನಿರ್ಧರಿಸಿದೆ. ನಗರದ ಪಕ್ಷದ ಶಾಸಕರೊಂದಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಸಭೆ ನಡೆಸಿ, ಈ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಈ ಸಭೆಯಲ್ಲಿ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್ ಸಮಿತಿ ವರದಿ ಹಾಗೂ ಅಬೈಡ್ ಸಲ್ಲಿಸಿದ್ದ ವರದಿಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆಗೆ ತಿದ್ದುಪಡಿ ತರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ದೇಶದಲ್ಲಿ ಒಂದು ಕೋಟಿ ಜನ ಸಂಖ್ಯೆ ಇರುವ ಮಹಾನಗರಗಳಲ್ಲಿ ಎಷ್ಟು ಪಾಲಿಕೆಗಳು ಕಾರ್ಯನಿರ್ವಹಿಸುತ್ತಿವೆ, ಮೇಯರ್ ಆಯ್ಕೆ ಪ್ರಕ್ರಿಯೆ ಸೇರಿದಂತೆ ಎಲ್ಲ ವ್ಯವಸ್ಥೆಗಳ ಕುರಿತು ಸಮಗ್ರ ಅಧ್ಯಯನ ನಡೆಸಿ ಕಾಯ್ದೆಗೆ ತಿದ್ದುಪಡಿ ತರಬೇಕು. ಸರಕಾರದ ಈ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.
– ಎಸ್.ಲಕ್ಷ್ಮಿನಾರಾಯಣ