ಬೆಂಗಳೂರು: ಬಿಬಿಎಂಪಿ ಚುನಾವಣೆ ಕುರಿತು ಚರ್ಚಿಸಲು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಘಟಕವು ಮೇ 28ರ ಶನಿವಾರ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕಾರ್ಯಕಾರಿಣಿ ಸಭೆ ಆಯೋಜಿಸಿದೆ.
ಬೆಂಗಳೂರು ನಗರ ಎಎಪಿ ಅಧ್ಯಕ್ಷ ಮೋಹನ್ ದಾಸರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ “ಶನಿವಾರ ಮಧ್ಯಾಹ್ನ 3 ಟೆಗೆ ಬೆಂಗಳೂರು ನಗರ ಕಾರ್ಯಕಾರಿಣಿ ಆರಂಭವಾಗಲಿದೆ. ಬೆಂಗಳೂರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳು, ನಗರದ ಅಭಿವೃದ್ಧಿ, ಪಕ್ಷ ಸಂಘಟನೆ, ಚುನಾವಣಾ ಸಿದ್ಧತೆ ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸಲಾಗುತ್ತದೆ. ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸೇರಿದಂತೆ ಆಮ್ ಆದ್ಮಿ ಪಾರ್ಟಿಯ ಅನೇಕ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
“ಮುಂಬರುವ ಬಿಬಿಎಂಪಿ ಹಾಗೂ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಬಗ್ಗೆ ಸಭೆಯಲ್ಲಿ ಚರ್ಚಿಸಲಿದ್ದೇವೆ. ಬೆಂಗಳೂರಿನಲ್ಲಿ ಅತ್ಯುತ್ತಮ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಒಳಚರಂಡಿ, ಕಸ ಸಂಗ್ರಹಣಾ ವ್ಯವಸ್ಥೆ, ಬೀದಿ ದೀಪಗಳು, ಪಾದಚಾರಿ ಮಾರ್ಗಗಳನ್ನು ಆಮ್ ಆದ್ಮಿ ಪಾರ್ಟಿ ಮಾತ್ರ ಕಲ್ಪಿಸಬಲ್ಲದು. ವಾರ್ಡ್ ಸಮಿತಿಗಳನ್ನು ಸಮರ್ಪಕವಾಗಿ ಜಾರಿಗೆ ತಂದು, ಜನಸ್ನೇಹಿ ಹಾಗೂ ಪಾರದರ್ಶಕ ಆಡಳಿತ ನೀಡುವ ಗುರಿಯನ್ನು ಎಎಪಿ ಇಟ್ಟುಕೊಂಡಿದೆ” ಎಂದು ಮೋಹನ್ ದಾಸರಿ ಹೇಳಿದರು.
ಇದನ್ನೂ ಓದಿ : ಚಿಕ್ಕಮಗಳೂರು: ಆಸ್ಪತ್ರೆಯಿಂದ ಪರಾರಿಯಾದ ವಿಚಾರಣಾಧೀನ ಖೈದಿ
ಎಎಪಿ ಬೆಂಗಳೂರು ನಗರ ಉಪಾಧ್ಯಕ್ಷರಾದ ಸುರೇಶ್ ರಾಥೋಡ್ ಮಾತನಾಡಿ, “ಬೆಂಗಳೂರಿನ ಜನತೆ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಸಾಮರ್ಥ್ಯವಿರುವ ಏಕೈಕ ಪಕ್ಷವೆಂದರೆ ಆಮ್ ಆದ್ಮಿ ಪಾರ್ಟಿ. ಬೆಂಗಳೂರಿಗಾಗಿ ಪಕ್ಷವು ಕಳೆದ ಹಲವು ವರ್ಷಗಳಿಂದ ಅಹರ್ನಿಶಿ ಹೋರಾಟಗಳನ್ನು ನಡೆಸಿದೆ. ಇದರಿಂದಾಗಿ ಆಡಳಿತ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿ, ಕಾರ್ಯಕರ್ತರು ಪೊಲೀಸ್ ಕೇಸುಗಳನ್ನು ಎದುರಿಸುತ್ತಿದ್ದಾರೆ. ರಾಜ್ಯ ರಾಜಧಾನಿಯ ಹಿತಕ್ಕಾಗಿ ಪಕ್ಷವು ಎಂತಹ ಸಾಹಸ ಹಾಗೂ ತ್ಯಾಗಕ್ಕೂ ಸಿದ್ಧವಿದೆ” ಎಂದು ಹೇಳಿದರು.