ಬೆಂಗಳೂರು: ಪಾಲಿಕೆಯ ಕಡತಗಳನ್ನು ಕಚೇರಿಯಿಂದ ಹೊರಕ್ಕೆ ತೆಗೆದುಕೊಂಡು ಹೋದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಬಿಬಿಎಂಪಿ ಆಯಕ್ತ ಎನ್. ಮಂಜುನಾಥ್ ಪ್ರಸಾದ್ ಅವರು ಎಚ್ಚರಿಕೆ ನೀಡಿದ್ದಾರೆ.
ಬೊಮ್ಮನಹಳ್ಳಿ ವಲಯದ ಪಾಲಿಕೆಯ ಸಹಾಯಕ ನಿರ್ದೇಶಕ (ಯೋಜನೆ) ದೇವೇಂದ್ರಪ್ಪ ಅವರು ಕಟ್ಟಡ ಕಾಮಗಾರಿಗೆ ಸಂಬಂಧಿಸಿದಂತೆ ಓಸಿ ನೀಡಲು ಲಂಚ ಕೇಳಿದ್ದು, ಭ್ರಷ್ಟಾಚಾರ ನಿಗ್ರಹ ದಳ ವಶಕ್ಕೆ ಪಡೆದುಕೊಂಡಿದೆ. ಈ ವೇಳೆ ಆರೋಪಿಯ ಕಾರಿನಲ್ಲಿ ಪಾಲಿಕೆಯ ಯೋಜನೆಗೆ ಸಂಬಂಧಿಸಿದ 50 ಕಡತಗಳು ಹಾಗೂ ಮನೆಯಲ್ಲಿ 430 ಕಡತಗಳು ಸೇರಿ ಒಟ್ಟು 480ಕ್ಕೂ ಹೆಚ್ಚು ಕಡತಗಳು ಪತ್ತೆಯಾಗಿವೆ.
ಈ ಸಂಬಂಧ ಉದಯವಾಣಿಯೊಂದಿಗೆ ಮಾತನಾಡಿದ ಪಾಲಿಕೆಯ ಆಯುಕ್ತ ಎನ್. ಮಂಜುನಾಥ್ ಪ್ರಸಾದ್, ಪಾಲಿಕೆಯ ಆಡಳಿತ ಹಾಗೂ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಕಡತಗಳನ್ನು ಪಾಲಿಕೆಯ ಅಧಿಕಾರಿಗಳು ಅಥವಾ ಸಿಬ್ಬಂದಿ ಅವರ ಮನೆಗೆ ಅಥವಾ ಅನ್ಯ ಸ್ಥಳಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:51 ಸಾವಿರ ಗಡಿ ತಲುಪಿ ದಾಖಲೆ ಬರೆದ ಷೇರುಪೇಟೆ: ಸೆನ್ಸೆಕ್ಸ್ 617 ಅಂಕ ಜಿಗಿತ, ನಿಫ್ಟಿ 15,000
ದೇವೇಂದ್ರಪ್ಪ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ತನಿಖಾ ವರದಿಯ ಆಧಾರದ ಮೇಲೆ ಮುಂದೆ ಪಾಲಿಕೆಯಿಂದಲೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಕಡತಗಳನ್ನು ಪಾಲಿಕೆಯ ಕಚೇರಿಯಿಂದ ಹೊರಕ್ಕೆ ತೆಗೆದುಕೊಂಡು ಹೋಗುವುದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.