Advertisement

ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಎತ್ತಂಗಡಿ: ಮಂಜುನಾಥ್ ಪ್ರಸಾದ್ ನೂತನ ಆಯುಕ್ತ

02:01 PM Jul 18, 2020 | keerthan |

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರನ್ನಾಗಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಎನ್. ಮಂಜುನಾಥ್ ಪ್ರಸಾದ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ.

Advertisement

ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ನಗರದಲ್ಲಿ ಕೋವಿಡ್ ಸೋಂಕಿಗೆ ಕಡಿವಾಣ ಹಾಕುವಲ್ಲಿ ಪಾಲಿಕೆ ವಿಫಲವಾಗಿದೆ ಎಂಬ ಆರೋಪ ವ್ಯಕ್ತವಾಗುತ್ತಿದೆ. ಅಲ್ಲದೆ, ಕಂಟೈನ್ಮೆಂಟ್ ಪ್ರದೇಶದಲ್ಲಿ ಆಹಾರ ವಿತರಣೆ ಮಾಡುವ ವಿಚಾರದಲ್ಲಿ ಪಾಲಿಕೆ ಎಡವಿದೆ ಎಂದು ಹೈಕೋರ್ಟ್ ಸಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದರ ಜೊತೆಗೆ ಮೇಯರ್ ಎಂ.ಗೌತಮ್‍ಕುಮಾರ್ ಹಾಗೂ ಪಾಲಿಕೆ ಸದಸ್ಯರೊಂದಿಗೆ ಪಾಲಿಕೆ ಆಯುಕ್ತರು ಸಮನ್ವಯತೆ ಸಾಧಿಸದೆ ಇರುವುದು ಸಹ ಹಲವು ಹಿರಿಯ ಸಚಿವರ ಆಕ್ಷೇಪಣೆಗೆ ಕಾರಣವಾಗಿತ್ತು.

ಮುಖ್ಯವಾಗಿ ಪಾಲಿಕೆ ಕೋವಿಡ್ ಆರೈಕೆ ಕೇಂದ್ರಕ್ಕೆ ಹಾಸಿಗೆ, ಮಂಚ ಹಾಗೂ ಫ್ಯಾನ್ ಸೇರಿದಂತೆ ವಿವಿಧ ವಸ್ತುಗಳ ಖರೀದಿ ವಿಚಾರದಲ್ಲಿ ಅವ್ಯವಹಾರ ನಡೆಸಿದೆ ಎಂಬ ಆರೋಪ ಸರ್ಕಾರವನ್ನು ತೀವ್ರ ಮುಜುಗರಕ್ಕೆ ದೂಡಿತ್ತು. ಈ ವಿಚಾರದಲ್ಲಿ ಬಿ.ಎಚ್.ಅನಿಲ್‍ಕುಮಾರ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೆಂಗಣ್ಣಿಗೂ ಗುರಿಯಾಗಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ಬಿ.ಎಚ್.ಅನಿಲ್‍ಕುಮಾರ್ ಅವರನ್ನು ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ.

ಬಿಬಿಎಂಪಿಯ ಆಯುಕ್ತರಾಗಿ ಬಿ.ಎಚ್.ಅನಿಲ್‍ಕುಮಾರ್ ಅವರು ನೇಮಕವಾಗುವ ಮುನ್ನ ಎನ್.ಮಂಜುನಾಥ್ ಪ್ರಸಾದ್ ಅವರೇ ಬಿಬಿಎಂಪಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆ ಪಾಲಿಕೆ ಮತ್ತು ಸರ್ಕಾರದ ಮಟ್ಟದಲ್ಲಿ ಮೂರು ಭಿನ್ನ ಪಕ್ಷಗಳಿದ್ದಗಲೂ ಜವಾಬ್ದಾರಿ ನಿರ್ವಹಿಸಿದ್ದ ಹಾಗೂ ಪಾಲಿಕೆಯಲ್ಲಿ ಸುರ್ದೀಘ ಕಾಲ ಸೇವೆ ಸಲ್ಲಿಸಿದ ಅನುಭವ ಮಂಜುನಾಥ್ ಪ್ರಸಾದ್ ಅವರಿಗೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next