Advertisement

ವಿಡಿಯೋ ಕಾನ್ಫರೆನ್ಸ್‌ ಮೂಲಕ ಬಿಬಿಎಂಪಿ ಬಜೆಟ್‌

01:50 PM Apr 14, 2020 | mahesh |

ಬೆಂಗಳೂರು: ಬಿಬಿಎಂಪಿಯ 2020-21ನೇ ಸಾಲಿನ ಬಜೆಟ್‌ ಮಂಡನೆಗೆ ಸರ್ಕಾರ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆ ಕಾಯ್ದೆಯಡಿ 2020-21ನೇ ಸಾಲಿನ ಪಾಲಿಕೆಯ ಬಜೆಟ್‌ ಶೀಘ್ರ ಮಂಡಿಸಲಾಗುವುದು ಎಂದು ಮೇಯರ್‌ ಎಂ. ಗೌತಮ್‌ಕುಮಾರ್‌ ತಿಳಿಸಿದ್ದಾರೆ. ಬಿಬಿಎಂಪಿಯ 2020- 21ನೇ ಸಾಲಿನ ಬಜೆಟ್‌ ಮಂಡನೆ ಮಾಡುವುದಕ್ಕೆ ಸರ್ಕಾರ ಸೋಮವಾರ ಅನುಮತಿ ನೀಡಿದೆ. ವಿಡಿಯೋ ಕಾನ್ಫರೆನ್ಸ್‌ನ ಮೂಲಕ ಬಿಬಿಎಂಪಿಯ ಎಂಟು ವಲಯದ ಪಾಲಿಕೆ ಸದಸ್ಯರು ವಲಯವಾರು ಸಾಮಾಜಿಕ ಅಂತರ ಕಾಯ್ದುಕೊಂಡು ಬಜೆಟ್‌ ಮಂಡನೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

Advertisement

ಈ ಸಂಬಂಧ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್‌, ಪಾಲಿಕೆ ಬಜೆಟ್‌ ಮಂಡನೆಯನ್ನು ಸಾಮಾನ್ಯವಾಗಿ ಕೆಎಂಸಿ ಕಾಯ್ದೆಯ ಅನ್ವಯ ಪಾಲಿಕೆ ಸದಸ್ಯರ ಮೂರನೇ ಒಂದು ಭಾಗ (ಬಹುಮತ)ಇದ್ದರೆ ಬಜೆಟ್‌ ಅನುಮೋದನೆ ಪಡೆದು ಕೊಳ್ಳಬಹುದು. ಆದರೆ, ಸದ್ಯ ಕೊರೊನಾ ಆತಂಕ ಇರುವ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆ ಕಾಯ್ದೆಯಡಿ ವಿಡಿಯೋ ಕಾನ್ಫರೆನ್ಸ್‌ನ ಮೂಲಕ ಬಜೆಟ್‌ ಮಂಡನೆ ಮಾಡಲಾಗುವುದು ಎಂದು ಹೇಳಿದರು.

ಬಜೆಟ್‌ ಮಂಡನೆ ಮಾಡುವ ಸಂಬಂಧ ಪಾಲಿಕೆಯ ಎಲ್ಲ ಭಾಗದ ಮುಖ್ಯ ಅಧಿಕಾರಿಗಳೊಂದಿಗೆ ಬುಧವಾರ ಬೆಳಗ್ಗೆ 11.30ಕ್ಕೆ ಸಭೆ ಹಮ್ಮಿಕೊಳ್ಳಲಾಗಿದೆ. ಇನ್ನು ಪಾಲಿಕೆಯ ಬಜೆಟ್‌ನಲ್ಲಿ 2020-21ನೇ ಸಾಲಿನ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಳ್ಳಲಾಗುವುದು ಎಂದು ಹೇಳಿದರು. ಈ ವೇಳೆ ಉಪಮೇಯರ್‌ ರಾಮಮೋಹನ್‌ ರಾಜ್‌, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌, ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್‌ ಹಾಜರಿದ್ದರು.

ಸರ್ಕಾರದಿಂದ ಷರತ್ತು ಬದ್ಧ ಅನುಮತಿ: ನಗರದಲ್ಲಿ ಕೊರೊನಾ ಸಮಸ್ಯೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಕೌನ್ಸಿಲ್‌ ಸಭೆ, ಚರ್ಚೆ ಹಾಗೂ ಬಜೆಟ್‌ ಮಂಡನೆ ಯಾವುದನ್ನೂ ಮಾಡಿರಲಿಲ್ಲ. ಈ ಮಧ್ಯೆ 2020-21ನೇ ಸಾಲಿನ ಆರ್ಥಿಕ ವರ್ಷ ಪ್ರಾರಂಭವಾದರೂ, ಬಿಬಿಎಂಪಿ ಬಜೆಟ್‌ ಮಂಡನೆಯಾಗದೆ ಪಾಲಿಕೆಯ ಆಡಳಿತಾತ್ಮಕ ಹಾಗೂ ಸೋಂಕು ತಡೆ ಯೋಜನೆಗಳಿಗೆ ಹಿನ್ನಡೆಯಾಗುವ ಆತಂಕ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಮೇಯರ್‌ ಎಂ. ಗೌತಮ್‌ಕುಮಾರ್‌ ಅವರು, ಬಿಬಿಎಂಪಿ ಬಜೆಟ್‌ ಮಂಡನೆಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಅದರಂತೆ ಪಾಲಿಕೆಯ 2020-21ನೇ ಸಾಲಿನ ಬಜೆಟ್‌ ಮಂಡನೆ ಮಾಡುವುದಕ್ಕೆ ಸರ್ಕಾರ ಅವಕಾಶ ನೀಡಿದೆ. ಬಜೆಟ್‌ ಅನ್ನು ಬಿಬಿಎಂಪಿಯ ಕೇಂದ್ರ ಕಚೇರಿಯ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಂಡಿಸಲು ಮೇಯರ್‌, ಉಪಮೇಯರ್‌, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು, ಬಿಬಿಎಂಪಿ ಆಯುಕ್ತ ಹಾಗೂ ಕೌನ್ಸಿಲ್‌ ಕಾರ್ಯದರ್ಶಿಗಳಿಗೆ ಅವಕಾಶ ನೀಡಲಾಗಿದೆ.

Advertisement

ಇನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು ಮಂಡನೆ ಮಾಡುವ ಬಜೆಟ್‌ನ ಬಗ್ಗೆ ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳ ಪಾಲಿಕೆ ಸದಸ್ಯರು ವಲಯ
ಮಟ್ಟದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆ ಸೇರಿ, ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಮಂಡನೆಯಾಗಲಿರುವ ಬಜೆಟ್‌ನ ಬಗ್ಗೆ ವಿಡಿಯೋ ಕಾನ್ಫರೆನ್ಸ್‌ನ ಮೂಲಕ ಚರ್ಚಿಸಿ ಅನುಮೋದನೆ ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಅಲ್ಲದೆ, ಈ ರೀತಿ ವಿಡಿಯೋ ಕಾನ್ಫರೆನ್ಸ್‌ನ ಮೂಲಕ ಅನುಮೋದನೆಯಾಗುವ  ಬಜೆಟ್‌ಅನ್ನು ಸರ್ಕಾರಕ್ಕೆ ಕಳುಹಿಸಿಕೊಡುವಂತೆ ನಿರ್ದೇಶಿಸಲಾಗಿದೆ.

ಸರ್ಕಾರ ವಿಡಿಯೋ ಕಾನ್ಫರೆನ್ಸ್‌ನ ಮೂಲಕ ಬಜೆಟ್‌ ಮಂಡನೆ ಮಾಡುವುದಕ್ಕೆ ಅವಕಾಶ ನೀಡಿದೆ. ಈ ಸಂಬಂಧ ಮೇಯರ್‌ ಹಾಗೂ ತೆರಿಗೆ ಮತ್ತು ಆರ್ಥಿಕ
ಸ್ಥಾಯಿ ಸಮಿತಿ ಅಧ್ಯಕ್ಷರೊಂದಿಗೆ ಚರ್ಚೆ ಮಾಡಿ ಶೀಘ್ರ ದಿನಾಂಕ ನಿಗದಿ ಮಾಡಲಾಗುವುದು.
ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next