ಬೆಂಗಳೂರು: ಬಿಬಿಎಂಪಿಯಲ್ಲಿ 2018-19ನೇ ಸಾಲಿನ ಪಾಲಿಕೆಯ ಬಜೆಟ್‌ಗೆ ಕೌನ್ಸಿಲ್ ಸಭೆ ಅನುಮೋದನೆ ಸಿಕ್ಕಿ ಹತ್ತು ದಿನ ಕಳೆದಿದೆ. ಆದರೆ, ಈವರೆಗೆ ಅನುಮೋದನೆಗಾಗಿ ಬಜೆಟ್ ಸರ್ಕಾರಕ್ಕೆ ಕಳುಹಿಸಲು ಪಾಲಿಕೆಯ ಅಧಿಕಾರಿಗಳು ಆಸಕ್ತಿ ತೋರಿಲ್ಲ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಾಲಿಕೆಯಲ್ಲಿ 3ನೇ ಬಾರಿಗೆ ಮಂಡಿಸಿದ ಬಜೆಟ್‌ನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್ ಅವರು ಕಳೆದ ಫೆ.28ರಂದು 9,325.53 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದ್ದರು.
ನಂತರ ಒಂದು ವಾರದ ಸುದೀರ್ಘ ಚರ್ಚೆಯ ಬಳಿಕ 883 ಕೋಟಿ ರೂ. ಹೆಚ್ಚುವರಿ ಆದಾಯ ಹಾಗೂ ವೆಚ್ಚದ ಪರಿಷ್ಕರಣೆಯೊಂದಿಗೆ 2018-19ನೇ ಸಾಲಿನ ಆಯವ್ಯಯದ ಮೊತ್ತವು 10,208 ಕೋಟಿ ರೂ.ಗೆ ಹೆಚ್ಚಿಸಿ ಮಾ.12ರಂದು ಕೌನ್ಸಿಲ್ ಸಭೆಯ ಅನುಮೋದನೆ ಪಡೆದಿದ್ದಾರೆ.
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಪರಿಷ್ಕೃತ ಬಜೆಟ್ ಬಿಬಿಎಂಪಿ ಆಯುಕ್ತರಿಗೆ ಕಳಿಸಿ ವಾರ ಕಳೆದಿದೆ. ಆದರೆ, ಅವರು ಬಜೆಟ್‌ನ್ನು ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲು ಮುಂದಾಗಿಲ್ಲ. ಚುನಾವಣೆ ಆಯೋಗವು ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೊಳಿಸುವ ಮೊದಲೇ ಬಜೆಟ್‌ಗೆ ಅನುಮೋದನೆ ಪಡೆಯಬೇಕಿದೆ. ಇಲ್ಲದಿದ್ದರೆ, ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಬಜೆಟ್‌ಗೆ ಅನುಮೋದನೆ ದೊರೆಯುವುದಿಲ್ಲ.
ಪರಿಷ್ಕೃತ ಬಜೆಟ್‌ಗೆ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆದು ಸಮಿತಿಯಿಂದ ಆಯುಕ್ತರಿಗೆ ಸಲ್ಲಿಸಲಾಗಿದ್ದು, ಆದಷ್ಟು ಬೇಗ ಆಯುಕ್ತರ ಮೂಲಕ ಅನುಮೋದನೆಗಾಗಿ ಬಜೆಟ್ ಸರ್ಕಾರಕ್ಕೆ ಕಳುಹಿಸಲಾಗುವುದು.
-ಎಂ.ಶಿವರಾಜು, ಆಡಳಿತ ಪಕ್ಷ ನಾಯಕ