Advertisement

ಮನೆಗಳ ಪಟ್ಟಾ ವಿತರಣೆಗೆ ವಿಳಂಬ; ಆನೆಗೊಂದಿ ಭಾಗದ ಜನರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ

01:19 PM Apr 05, 2024 | Team Udayavani |

ಗಂಗಾವತಿ: ಕಳೆದ 70 ವರ್ಷಗಳಿಂದ ಆನೆಗೊಂದಿ ಸಾಣಾಪೂರ, ಮಲ್ಲಾಪುರ ಹಾಗೂ ಸಂಗಾಪೂರ ಭಾಗದ ಕೆಲ ಗ್ರಾಮಗಳಲ್ಲಿ ವಾಸ ಮಾಡುವ ನಿವಾಸಿಗಳ ಮನೆಗಳಿಗೆ ಪಟ್ಟ ನೀಡುವಲ್ಲಿ ಕಂದಾಯ ಇಲಾಖೆ ಮತ್ತು ತಾಲೂಕು ಆಡಳಿತ ವಿಳಂಬ ಮಾಡುತ್ತಿದ್ದು, ಇದನ್ನು ಖಂಡಿಸಿ ಆನೆಗೊಂದಿ ಭಾಗದ 5 ಗ್ರಾಮಗಳ ಗ್ರಾಮಸ್ಥರು ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಚಿಕ್ಕರಾಂಪೂರ (ನಂದಯ್ಯನ ಕ್ರಾಸ್) ಗ್ರಾಮದ ನೀಲಪ್ಪ ಹೋಟೆಲ್ ಮಾತನಾಡಿ, ಕಳೆದ 70 ವರ್ಷಗಳಿಂದ ನಮ್ಮ ಹಿರಿಯರು ಬೇರೆ, ಬೇರೆ ಊರುಗಳಿಂದ ಆನೆಗೊಂದಿ ಭಾಗದ ಚಿಕ್ಕರಾಂಪುರ, ಹನುಮನಹಳ್ಳಿ, ಮುದುಕರಪ್ಪನ ಕ್ಯಾಂಪ್ ಜಂಗ್ಲಿ, ಅಂಜಿನಳ್ಳಿ ಗ್ರಾಮಗಳಲ್ಲಿ ವಾಸ ಮಾಡುತ್ತಿದ್ದು, ಸರ್ಕಾರಿ ಮತ್ತು ಡಿಮ್ಡ್ ಅರಣ್ಯ ಪ್ರದೇಶದಲ್ಲಿ ಮನೆಗಳ ನಿರ್ಮಿಸಿಕೊಂಡಿದ್ದಾರೆ. ಇದುವರೆಗೂ ಈ ಮನೆಗಳಿಗೆ ಪಟ್ಟ ನೀಡುವಲ್ಲಿ ತಾಲೂಕು ಆಡಳಿತ ವಿಫಲವಾಗಿದ್ದು, ಕೇಂದ್ರ ಸರ್ಕಾರದ ಮಹತ್ವದ ಸ್ವಾಮಿತ್ವ ಯೋಜನೆಯಡಿ ಈಗಾಗಲೇ ಎರಡು ಬಾರಿ ಸರ್ವೇ ಮಾಡಿದರೂ ಪಟ್ಟಾ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದನ್ನು ಖಂಡಿಸಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಿ ಹನುಮನಹಳ್ಳಿ ಗ್ರಾಮಸ್ಥರು ಸೇರಿದಂತೆ ಇತರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸರ್ವೆ ನಡೆಸಿ ಪಟ್ಟಾ ವಿತರಣೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರೂ ಇದುವರೆಗೂ ಪಟ್ಟಾ ವಿತರಣೆಯಾಗಿಲ್ಲ.

ಈಗ ಲೋಕಸಭಾ ಚುನಾವಣೆ ಬಂದಿದ್ದು, ಮತದಾನವನ್ನು ಬಹಿಷ್ಕರಿಸಲು ಚಿಕ್ಕ ರಾಂಪುರ ಅಂಜಿನಳ್ಳಿ, ಜಂಗ್ಲಿ ಹನುಮನಹಳ್ಳಿ ರಂಗಾಪುರ ಗ್ರಾಮಸ್ಥರು ನಿರ್ಧಾರ ಮಾಡಿದ್ದು, ಈಗಾಗಲೇ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ.

Advertisement

ರಾಜ್ಯ ಸರಕಾರ ಮತ್ತು ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ಭಾಗದ ಸಂಗಾಪುರದಿಂದ ಹಿಡಿದು ತಿಮ್ಲಾಪುರದವರಿಗೆ ಇರುವ ನಿವಾಸಿಗಳ ಮನೆಗಳಿಗೆ ಪಟ್ಟಾಗಳನ್ನು ವಿತರಣೆ ಮಾಡುವ ಮೂಲಕ ಬದುಕುವ ಹಕ್ಕನ್ನು ಉಳಿಸಿಕೊಡಬೇಕು. ನಮ್ಮಗಳ ಹೆಸರಿಗೆ ಜಾಗವನ್ನು ಖಾತಾ ಪುಸ್ತಕದಲ್ಲಿ ನಮೂದಿಸಿಕೊಳ್ಳದೇ ಇರುವುದು ತುಂಬಾ ಶೋಚನೀಯ ವಿಷಯವಾಗಿರುತ್ತದೆ. ಅರಣ್ಯ, ಕಂದಾಯ, ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಪದೇ ಪದೇ ಆಗಮಿಸಿ ನೋಟಿಸ್ ನೀಡುವುದು ಸೇರಿದಂತೆ ವಾಸಿಸುತ್ತಿರುವ ಜಾಗವು ಅರಣ್ಯ ಪ್ರದೇಶವಾಗಿರುವುದರಿಂದ ನಿಮಗೆಲ್ಲರಿಗೆ ನಮ್ಮ ಕಾರ್ಯಾಲಯದಿಂದ ಯಾವುದೇ ಹಕ್ಕು ಪತ್ರ ವಿತರಿಸಲು ಬರುವುದಿಲ್ಲವೆಂದು ಖಡಾ ಖಂಡಿತವಾಗಿ ಎಚ್ಚರಿಕೆ ನೀಡುತ್ತಿದ್ದಾರೆ.

ಆದರೆ ನಮ್ಮ ಕುಟುಂಬಗಳು ಇದೇ ಸ್ಥಳದಲ್ಲಿ ಸುಮಾರು ವರ್ಷಗಳಿಂದ ಕೃಷಿ ಕೂಲಿ- ಕೆಲಸವನ್ನು ಮಾಡುತ್ತಾ ಜೀವನವನ್ನು ಸಾಗಿಸಿಕೊಂಡು ಬಂದಿವೆ. ಆದರೆ ನಮ್ಮಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದನೆ ನೀಡದಿರುವುದು ತುಂಬಾ ಆಘಾತಕಾರಿಯಾದ ವಿಷಯವಾಗಿರುತ್ತದೆ. ಈ ಗ್ರಾಮಗಳಲ್ಲಿ ಸಿ.ಸಿ.ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಶಕ್ತಿ, ರಸ್ತೆ, ಸರ್ಕಾರಿ ಶಾಲೆಗಳು, ಅಂಗನವಾಡಿ ಶಾಲೆಗಳು. ಎಲ್ಲಾ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿತ್ತಾರೆ. ಆದರೆ ಹಕ್ಕುಪತ್ರಗಳನ್ನು ಮಾತ್ರ ನೀಡಿರುವುದಿಲ್ಲ.  ಪಂಚಾಯಿತಿ ಅಧಿಕಾರಿಗಳು ನಮ್ಮ ಜಾಗಕ್ಕೆ ಎಲ್ಲಾ ರೀತಿಯ ತೆರಿಗೆಯನ್ನು ಭರಿಸಿಕೊಂಡಿರುತ್ತಾರೆ.

ನಮ್ಮ ಕುಟುಂಬಗಳು  ನೆಮ್ಮದಿಯಿಂದ ಜೀವನವನ್ನು ಸಾಗಿಸಲು ಆಗುತ್ತಿಲ್ಲ.  ನಮ್ಮ ಪೂರ್ವಜರ ಹಿತಾಸಕ್ತಿಗಳು ಕೂಡ ಧಕ್ಕೆಯಾಗುತ್ತಿದ್ದು ಕೂಡಲೇ ಆನೆಗೊಂದಿ, ಮಲ್ಲಾಪೂರ,ಸಂಗಾಪೂರ ಮತ್ತು ಸಾಣಾಪೂರ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಲ್ಲಿ ಹಕ್ಕುಪತ್ರಗಳ ಕೂಡಲೇ ವಿತರಣೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಈ‌ ಸಂದರ್ಭದಲ್ಲಿ ನೀಲಪ್ಪ, ಉಡಚಮ್ಮ, ಯಮನಮ್ಮ, ದೊಡ್ಡಮ್ಮ, ಚೌರಪ್ಪ, ಲಕ್ಷ್ಮಣನಾಯ್ಕ್, ಗಾಳೆಮ್ಮ, ಗೋಪಾಲ, ಆಂಜಿನಿ, ಜ್ಯೋತಿ, ಕಲ್ಲಯ್ಯಸ್ವಾಮಿ, ಸೋಮರಾಜ, ಮಂಜುನಾಥ, ವೆಂಕೋಬಿ, ಪರಶುರಾಮ, ನಾರಾಯಣ, ನಿಂಗಜ್ಜ, ರಾಮನಾಯಕ ಸೇರಿ ನೂರಾರು ಜನರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next