Advertisement
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೂಲಸೌಕರ್ಯ ಒದಗಿಸುವುದು ಸೇರಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿನ ಬಜೆಟ್ ಸಿದ್ಧಪಡಿಸಲು ಬಿಬಿಎಂಪಿ ಹಣಕಾಸು ವಿಭಾಗ ಸಿದ್ಧತೆ ನಡೆಸಿದೆ.
Related Articles
Advertisement
ಬಿಬಿಎಂಪಿಗೆ ಆಸ್ತಿ ತೆರಿಗೆ ಮಾತ್ರ ಅತಿದೊಡ್ಡ ಆದಾಯದ ಮೂಲ. ಪ್ರಸಕ್ತ ಸಾಲಿನಲ್ಲಿ (2022-23) 10943.54 ಕೋಟಿ ರೂ. ಬಜೆಟ್ ಮಂಡಿಸಿ, 4,200 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಅದರಲ್ಲಿ ಈವರೆಗೆ 3 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. ಇದನ್ನು ಗಮನಿಸಿದರೆ ಬಿಬಿಎಂಪಿ ಆದಾಯದಿಂದ ಬೆಂಗಳೂರಿನಲ್ಲಿ ಮೂಲಸೌಕರ್ಯ ಕಾಮಗಾರಿ ಕೈಗೊಳ್ಳುವುದು ಕಷ್ಟ. ಹೀಗಾಗಿ ಪ್ರತಿಯೊಂದಕ್ಕೂ ರಾಜ್ಯ ಸರ್ಕಾರ ನೀಡುವ ಅನುದಾನ ಅವಲಂಬಿಸಬೇಕಾದ ಪರಿಸ್ಥಿತಿ ಬಿಬಿಎಂಪಿಗಿದೆ. ಹೀಗಾಗಿ ಬಜೆಟ್ ಅನ್ನು ಕೂಡ ರಾಜ್ಯ ಸರ್ಕಾರದ ಅನುದಾನದ ಆಧಾರದಲ್ಲಿಯೇ ಸಿದ್ಧಪಡಿಸಲಾಗುತ್ತಿದೆ.
ಫೆಬ್ರವರಿ ಅಂತ್ಯ, ಮಾರ್ಚ್ ಆರಂಭಕ್ಕೆ ಬಜೆಟ್ : ರಾಜ್ಯ ಸರ್ಕಾರ ಘೋಷಿಸಿರುವ ಅನುದಾನದಂತೆ ಬಿಬಿಎಂಪಿ ಬಜೆಟ್ ಸಿದ್ಧಪಡಿಸಲಾಗುತ್ತಿದೆ. ಅದಕ್ಕೆ ನಗರಾಭಿವೃದ್ಧಿಯಿಂದ ಒಪ್ಪಿಗೆ ಸಿಗಬೇಕಿದೆ. ಜತೆಗೆ ಬಜೆಟ್ ಪುಸ್ತಕ ಮುದ್ರಣ ಸೇರಿ ಇನ್ನಿತರ ತಯಾರಿ ಮಾಡಬೇಕಿದೆ. ಹೀಗಾಗಿ ಬಜೆಟ್ ಸಿದ್ಧಪಡಿಸಲು ಕನಿಷ್ಠ 7ರಿಂದ 8 ದಿನಗಳು ಬೇಕಾಗಲಿದೆ. ಅದಾದ ನಂತರವಷ್ಟೇ ಬಜೆಟ್ ಮಂಡಿಸಲು ಸಾಧ್ಯವಾಗಲಿದೆ. ಮೂಲಗಳ ಪ್ರಕಾರ ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ಬಾರ ಬಿಬಿಎಂಪಿ ಬಜೆಟ್ ಮಂಡನೆಯಾಗುವ ಸಾಧ್ಯತೆಗಳಿವೆ.
3ನೇ ಬಾರಿ ಅಧಿಕಾರಿಗಳ ಮಂಡನೆ : ಬಿಬಿಎಂಪಿ ಸದಸ್ಯರ ಅವಧಿ 2020ರ ಸೆಪ್ಟೆಂಬರ್‌ನಲ್ಲಿ ಮುಕ್ತಾಯಗೊಂಡಿದ್ದು, ಈವರೆಗೆ ಚುನಾವಣೆ ನಡೆದಿಲ್ಲ. ಹೀಗಾಗಿ ಚುನಾಯಿತಿ ಪ್ರತಿನಿಧಿಗಳಿಲ್ಲದಂತಾಗಿದ್ದು, ಅಧಿಕಾರಿಗಳೇ ಬಜೆಟ್ ಮಂಡಿಸಬೇಕಿದೆ. 2015ರಲ್ಲಿ ಬಿಬಿಎಂಪಿ ಅವಧಿ ಮುಕ್ತಾಯಗೊಳ್ಳುವುದಕ್ಕೆ ಮುಂಚೆಯೇ ಜನಪ್ರತಿನಿಧಿಗಳು ಬಜೆಟ್ ಮಂಡಿಸಿದ್ದರು. ಅದಾದ ನಂತರ ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದ ಟಿ.ಎಂ. ವಿಜಯಭಾಸ್ಕರ್ ಬಜೆಟ್ ಪರಿಷ್ಕರಿಸಿದ್ದು ಬಿಟ್ಟರೆ ಮರುಮಂಡನೆ ಮಾಡಿರಲಿಲ್ಲ. ಆದರೆ, 2020ರಿಂದ ಈಚೆಗೆ ಬಿಬಿಎಂಪಿ ಹಣಕಾಸು ವಿಭಾಗದ ಅಧಿಕಾರಿಗಳೇ ಬಜೆಟ್ ಮಂಡಿಸುತ್ತಿದ್ದಾರೆ. 2021-22 ಮತ್ತು 2022-23ನೇ ಸಾಲಿನ ಬಜೆಟ್ ಅನ್ನು ಅಧಿಕಾರಿಗಳು ಮಂಡಿಸಿದ್ದರು. ಅದರಲ್ಲೂ 2022-23ನೇ ಸಾಲಿನ ಬಜೆಟ್ ಅನ್ನು 2022ರ ಮಾರ್ಚ್ 31ರಂದು ರಾತ್ರಿ 11 ಗಂಟೆಗೆ ಮಂಡಿಸಲಾಗಿತ್ತು. ಇದೀಗ ಬಿಬಿಎಂಪಿ ರಚನೆ ನಂತರ ಮೂರನೇ ಬಾರಿಗೆ ಅಧಿಕಾರಿಗಳೇ ಬಜೆಟ್ ಮಂಡಿಸುವಂತಾಗಿದೆ.