ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ(ಎಸ್ ಎ ಸ್) ಅಡಿಯಲ್ಲಿ ಸುಳ್ಳು ಮಾಹಿತಿ ನೀಡಿ ತೆರಿಗೆ ವಂಚಿಸಿದ್ದ ಆಸ್ತಿ ಮಾಲೀಕರಿಗೆ ಬಡ್ಡಿ ಮತ್ತು ದಂಡ ರಹಿತ ಶುಲ್ಕ ವಸೂಲಿ ಮಾಡುವ ವಿಚಾರ ನೆನಗುದಿಗೆ ಬಿದ್ದಿದೆ.
ಬೆಂಗಳೂರಿನಲ್ಲಿ 19 ಲಕ್ಷಕ್ಕೂ ಹೆಚ್ಚಿನ ಆಸ್ತಿಗಳಿವೆ. ಆ ಆಸ್ತಿಗಳಿಗೆ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ಮಾಲೀಕರೆ ತೆರಿಗೆ ನಿಗದಿ ಮಾಡಿಕೊಳ್ಳುವ ವ್ಯವಸ್ಥೆ ಜಾರಿ ಗೊಳಿಸಲಾಗಿತ್ತು. 2008 ಮತ್ತು 2016ನೇ ಸಾಲಿನಲ್ಲಿ ಪ್ರಕಟವಾದ ಅಧಿಸೂಚನೆಯಂತೆ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಬೀದಿಗಳು, ಪ್ರದೇಶಗಳು ಮತ್ತು ರಸ್ತೆಗಳನ್ನು 6 ವಿವಿಧ (ಎ, ಬಿ, ಸಿ, ಡಿ, ಇ, ಎಫ್) ವಲಯಗಳಾಗಿ ವಿಂಗಡಿಲಾಗಿತ್ತು.
ಸ್ವತ್ತಿನ ಉಪಯೋಗ ಸ್ವಂತ ಅಥವಾ ಬಾಡಿಗೆ ಮತ್ತು ಹಲವು ವರ್ಗಗಳ ಬಳಕೆಯ ಆಧಾರದ ಮೇಲೆ ವಲಯ “ಎ’ ಯಿಂದ “ಎಫ್’ವರೆಗೆ ಆಸ್ತಿ ತೆರಿಗೆ ಪಾವತಿ ದರಗಳನ್ನು ನಿಗದಿಪಡಿಸಲಾಗಿತ್ತು. ಆದರೆ, 70 ಸಾವಿರಕ್ಕೂ ಹೆಚ್ಚಿನ ತೆರಿಗೆದಾರರು ಆಸ್ತಿಯ ವಿವರ ಮತ್ತು ವಲಯಗಳನ್ನು ತಪ್ಪಾಗಿ ಗುರುತಿಸಿ ಬಿಬಿಎಂಪಿಗೆ ತೆರಿಗೆ ವಂಚಿಸಿದ್ದರು. ಇದನ್ನು ಸರಿಪಡಿಸುವ ಕುರಿತಂತೆ ಬಿಬಿಎಂಪಿಯಿಂದ ಸರ್ಕಾರದ ಮೊರೆ ಹೋಗಿ 6 ತಿಂಗಳಾದರೂ ಇತ್ಯರ್ಥವಾಗಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಗಳನ್ನು ವಲಯ ವರ್ಗೀ ಕರಣ ಮಾಡಿದ ನಂತರ ಮಾಲೀಕರು ತಮ್ಮ ವಲಯಗಳ ಆಧಾರದಲ್ಲಿ ಆಸ್ತಿ ತೆರಿಗೆ ಪಾವತಿಗೆ ಸೂಚಿಸಲಾಗಿತ್ತು. ಈ ವೇಳೆ 73 ಸಾವಿರ ಆಸ್ತಿಗಳ ಮಾಲೀಕರು ವಲಯಗಳನ್ನು ತಪ್ಪಾಗಿ ಘೋಷಿಸಿಕೊಂಡಿದ್ದರು.
ಇದರಿಂದ ಬಿಬಿಎಂಪಿಗೆ 10 ಕೋಟಿ ರೂ. ತೆರಿಗೆ ವಂಚನೆ ಆಗಿತ್ತು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಂದಾಯ ಅಧಿಕಾರಿಗಳು ವಲಯ ತಪ್ಪಾಗಿ ಘೋಷಣೆ ಮಾಡಿಕೊಂಡ ಮಾಲೀಕರ ಮೇಲೆ ದುಬಾರಿ ದಂಡದ ನೋಟಿಸ್ ನೀಡಿದಾಗ, ಭಾರೀ ವಿರೋಧ ವ್ಯಕ್ತವಾಗಿತ್ತು. ಈ ವೇಳೆ ಬಿಬಿಎಂಪಿಯು ಆಸ್ತಿಗಳ ವಲಯ ತಪ್ಪಾಗಿ ಘೋಷಣೆ ಮಾಡಿಕೊಂಡು ತೆರಿಗೆ ವಂಚಿಸಿದ ಮಾಲೀಕರಿಗೆ ದಂಡ ಅಥವಾ ಬಡ್ಡಿಯನ್ನು ವಿಧಿಸದೇ, ವಂಚನೆ ಮಾಡಿದ ಮೊತ್ತವನ್ನು ವಸೂಲಿ ಮಾಡುವುದಕ್ಕೆ ಅನುಮೋದನೆ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಈ ಕುರಿತಂತೆ ಸರ್ಕಾರ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಆಸ್ತಿ ಮಾಲೀಕರ ಸಮಸ್ಯೆ ಇತ್ಯರ್ಥವಾಗಂದಂತಾಗಿದೆ.