ಪರ್ತ್: ಪರ್ತ್ ಸ್ಕಾರ್ಚರ್ಸ್ ಮತ್ತು ಬ್ರಿಸ್ಬೇನ್ ಹೀಟ್ ನಡುವೆ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಪಂದ್ಯದಲ್ಲಿ ಚೆಂಡು ಸ್ಟಂಪ್ ಗೆ ಬಡಿದರೂ ಬೇಲ್ಸ್ ಹಾಗೇ ಉಳಿದ ಅಪರೂಪದ ಪ್ರಸಂಗ ನಡೆದಿದೆ.
ಸ್ಕಾರ್ಚರ್ಸ್ ಇನ್ನಿಂಗ್ಸ್ ನ ಅಂತಿಮ ಎಸೆತದಲ್ಲಿ ಈ ಘಟನೆ ನಡೆದಿದೆ. ಪಾಲ್ ವಾಲ್ಟರ್ ಅವರು ಲೆಂತ್ ಬಾಲ್ ಹಾಕಿದರು, ಬ್ಯಾಟರ್ ನಿಕ್ ಹಾಬ್ಸನ್ ದೊಡ್ಡ ಹೊಡೆತವನ್ನು ಪ್ರಯತ್ನಿಸಿದರು ಆದರೆ ಇನ್ಸೈಡ್ ಎಡ್ಜ್ ಆದ ಚೆಂಡು ಲೆಗ್ ಸ್ಟಂಪ್ ಗೆ ಬಡಿದು ಹೋಯಿತು. ಆದರೆ ವಿಕೆಟ್ ನಲ್ಲಿ ಲೈಟ್ ಬಂದರೂ ಬೇಲ್ ಗಳು ಕೆಳ ಬೀಳಲಿಲ್ಲ, ಬ್ಯಾಟರ್ ಗಳು ಕೂಡಲೇ ಒಂಟಿ ರನ್ ಕಸಿದರು.
ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿಗ್ ಬ್ಯಾಷ್ ಅಧಿಕೃತ ಹ್ಯಾಂಡಲ್, “ಅದು ಹೇಗೆ ನಡೆದಿದೆ? ಚೆಂಡು ‘ಎಲೆಕ್ಟ್ರಾ ಸ್ಟಂಪ್ಸ್’ಗೆ ಅಪ್ಪಳಿಸಿತು, ಆದರೆ ಬೇಲ್ಸ್ ಚಲಿಸಿಯೂ ಇಲ್ಲ” ಎಂದು ಬರೆದಿದೆ.
ಪರ್ತ್ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪರ್ತ್ ಸ್ಕಾಚರ್ಸ್ ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಬ್ರಿಸ್ಬೇನ್ ಹೀಟ್ ತಂಡವು 19.5 ಓವರ್ ಗಳಲ್ಲಿ 128 ರನ್ ಗಳಿಗೆ ಆಲೌಟಾಯಿತು. ಈ ಮೂಲಕ ಪರ್ತ್ ತಂಡವು 35 ರನ್ ಅಂತರದ ಗೆಲುವು ಸಾಧಿಸಿತು.